ಮುಂಬೈನಲ್ಲಿ ವರುಣನ ಅಬ್ಬರ: ರಾತ್ರಿಯಿಡೀ ಸುರಿದ ಮಳೆಗೆ ಜಲಾವೃತವಾದ ದಾದರ್; ಮುಂಬೈ ಮತ್ತು ಪಾಲ್ವರ್ಗೆ ರೆಡ್ ಅಲರ್ಟ್!

ಮುಂಬೈ: ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ದಾದರ್ ರೈಲು ನಿಲ್ದಾಣ ಸೇರಿದಂತೆ ಮುಂಬೈನ ಪ್ರಮುಖ ಭಾಗಗಳು ಜಲಾವೃತಗೊಂಡಿವೆ. ನಗರದಲ್ಲಿ ಕಳೆದ 24 ಗಂಟೆಗಳಲ್ಲಿ 300 ಮಿಲಿಮೀಟರ್ಗಿಂತಲೂ ಹೆಚ್ಚು ಮಳೆ ದಾಖಲಾಗಿದ್ದು, ಭಾರತೀಯ ಹವಾಮಾನ ಇಲಾಖೆಯು ‘ಅತ್ಯಂತ ತೀವ್ರವಾದ ಮಳೆ’ ಎಂದು ಹೇಳಿಕೆ ನೀಡಿದೆ.
ಮಹಾನಗರ ಪ್ರದೇಶದ ಹಲವು ಭಾಗಗಳಲ್ಲಿ ಭಾರೀ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು ಬುಧವಾರ ಮುಂಜಾನೆ 4 ಗಂಟೆಗೆ ಮುಂಬೈ ಮತ್ತು ಪಾಲ್ವರ್ ಜಿಲ್ಲೆಗಳಿಗೆ ಮೂರು ಗಂಟೆಗಳ ಅವಧಿಯ ‘ರೆಡ್ ಅಲರ್ಟ್’ ಘೋಷಿಸಿದೆ. ಸಿಡಿಲು, ಮಿಂಚು ಕೂಡಿದ ತೀವ್ರವಾದ ಮಳೆ ಮತ್ತು ಗಂಟೆಗೆ 40-60 ಕಿಮೀ ವೇಗದ ಗಾಳಿ ಬೀಸುವ ಎಚ್ಚರಿಕೆಯನ್ನು ನೀಡಿದೆ.

ಮುಂಜಾನೆ 7 ಗಂಟೆಗೆ ಆರೆಂಜ್ ಅಲರ್ಟ್ಗೆ ಇಳಿಸಿ ಹವಾಮಾನ ಇಲಾಖೆಯು ಸೂಚನೆ ನೀಡಿದ್ದು, ಮುಂದಿನ ಮೂರು ಗಂಟೆಗಳ ಕಾಲ ಮುಂಬೈ, ಠಾಣೆ, ರಾಯಗಢ, ಪಾಲ್ವರ್ ಮತ್ತು ಸಿಂಧುದುರ್ಗ ಜಿಲ್ಲೆಗಳಲ್ಲಿ ಸಾಧಾರಣದಿಂದ ತೀವ್ರ ಗಾಳಿಯೊಂದಿಗೆ ಮಳೆಯಾಗುವ ಸಂಭವವಿದೆ ಎಂದು ಹೇಳಿತ್ತು.
ಮಾತುಂಗಾ ಪ್ರದೇಶದ ಕಿಂಗ್ಸ್ ಸರ್ಕಲ್ನಲ್ಲಿ ಟ್ರಕ್ಗಳು ಮತ್ತು ಇತರ ವಾಹನಗಳು ನೀರು ತುಂಬಿದ ರಸ್ತೆಗಳ ಮಧ್ಯೆ ಸಾಗುತ್ತಿರುವುದು ಕಂಡುಬಂದಿದೆ. ಬುಧವಾರ ಮುಂಜಾನೆ ದಾದರ್ನ ಹಿಂದೂ ಕಾಲೋನಿಯ ವಸತಿ ಪ್ರದೇಶಗಳು ಮತ್ತು ಸೆಂಟ್ರಲ್ ಹಾಗೂ ವೆಸ್ಟರ್ನ್ ಉಪನಗರ ರೈಲ್ವೆ ಮಾರ್ಗಗಳು ಸಂಧಿಸುವ ಪ್ರಮುಖ ಸ್ಥಳವಾದ ದಾದರ್ ನಿಲ್ದಾಣವು ಸಂಪೂರ್ಣ ಜಲಾವೃತಗೊಂಡಿರುವುದು ಕಂಡುಬಂದಿದೆ. ಭಾರೀ ಮಳೆಗೆ ಮುಂಬೈನ ವಿಪ್ರೋಲಿ ವೆಸ್ಟ್ನಲ್ಲಿ ಮಂಗಳವಾರ ರಾತ್ರಿ ವಸತಿ ಕಟ್ಟಡವೊಂದರ ಪಕ್ಕದಲ್ಲಿದ್ದ ತಡೆಗೋಡೆ ಕುಸಿದು ಬಿದ್ದಿದೆ.
ಹವಾಮಾನ ಇಲಾಖೆಯು ಈ ಬಗ್ಗೆ ಮಾಹಿತಿ ನೀಡಿದ್ದು, ನೈಋತ್ಯ ಮುಂಗಾರು ತನ್ನ ಸಾಮಾನ್ಯ ಆರಂಭದ ದಿನಾಂಕಕ್ಕಿಂತ 13
ದಿನಗಳು ತಡವಾಗಿ ಮಂಗಳವಾರ ಮುಂಬೈ ತಲುಪಿದ್ದು, ಮಧ್ಯ ಅರಬ್ಬಿ ಸಮುದ್ರದ ಉಳಿದ ಭಾಗಗಳು, ಮುಂಬೈ ಸೇರಿದಂತೆ
ಮಹಾರಾಷ್ಟ್ರದ ಇನ್ನು ಕೆಲವು ಭಾಗಗಳು, ತೆಲಂಗಾಣ ಮತ್ತು ಒಡಿಶಾದ ಉಳಿದ ಭಾಗಗಳು ಹಾಗೂ ಛತ್ತೀಸ್ಗಢ, ಜಾರ್ಖಂಡ್
ಮತ್ತು ಬಿಹಾರದ ಇನ್ನು ಕೆಲವು ಭಾಗಗಳಿಗೆ ಮತ್ತಷ್ಟು ಮುನ್ನಡೆದಿದೆ ಎಂದು ಪ್ರಕಟಿಸಿದೆ.
ಮುಂಬೈನಲ್ಲಿ ಮುಂಗಾರು ಮಳೆ ಸಾಮಾನ್ಯವಾಗಿ ಜೂನ್ 10 ರಂದು ಆರಂಭವಾಗುತ್ತದೆ. ಹವಾಮಾನ ಇಲಾಖೆಯ ದತ್ತಾಂಶದ ಪ್ರಕಾರ, 2023ರಲ್ಲಿ ತಡವಾಗಿ, ಅಂದರೆ ಜೂನ್ 25 ರಂದು ಪ್ರವೇಶಿಸಿತ್ತು. ಇನ್ನು 1974 ಮತ್ತು 1958ರಲ್ಲಿ ಅತ್ಯಂತ ದೀರ್ಘಾವಧಿಯ ವಿಳಂಬ ದಾಖಲಾಗಿದ್ದು, ಆಗ ಜೂನ್ 28 ರಂದು ಮುಂಗಾರು ಆರಂಭವಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಗರದ ಎಲ್ಲಾ ಪ್ರಮುಖ ಸಬ್ಬೇಗಳು (ಕೆಳಸೇತುವೆಗಳು) ಮಂಗಳವಾರ ಸಂಚಾರಕ್ಕೆ ಮುಕ್ತವಾಗಿದ್ದು, ಸಂಚಾರ ಎಂದಿನಂತೆ ಸಾಮಾನ್ಯವಾಗಿತ್ತು ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ ಹೇಳಿದೆ. ಉಪನಗರ ರೈಲ್ವೆ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಿದೆ ಮತ್ತು ಬೆಸ್ಟ್ ಬಸ್ ಸೇವೆಗಳೂ ಸಹ ಯಾವುದೇ ಅಡಚಣೆಯಿಲ್ಲದೆ ಸಂಚರಿಸಿದವು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಆದಾಗ್ಯೂ ಹಲವಾರು ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆಯ ಬಗ್ಗೆ ವರದಿಯಾಗಿದೆ. ರಾತ್ರಿಯಿಡೀ ಸುರಿದ ಮಳೆ ಮತ್ತು ಪ್ರವಾಹದ ಪರಿಸ್ಥಿತಿಯಿಂದಾಗಿ ಅಂಧೇರಿ ಸಬ್ಬೇಯನ್ನು ಬುಧವಾರ ಮುಚ್ಚಲಾಗಿತ್ತು ಎಂದು ತಿಳಿದು ಬಂದಿದೆ.
ಮಂಗಳವಾರ ರಾತ್ರಿ ಅಂಧೇರಿಯ ರಸ್ತೆಗಳಲ್ಲಿ ಜನರು ಮೊಣಕಾಲಿನವರೆಗೆ ಇದ್ದ ನೀರಿನಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಬಿಎಂಸಿ ಪ್ರಕಾರ, ಮಂಗಳವಾರ ಬೆಳಿಗ್ಗೆ 8 ರಿಂದ ಸಂಜೆ 7 ಗಂಟೆಯ ನಡುವೆ ಕೇಂದ್ರ ಮುಂಬೈನ ನಾಯರ್ ಆಸ್ಪತ್ರೆಯಲ್ಲಿ ಅತ್ಯಧಿಕ 78.96 ಮಿಮೀ ಮಳೆ ದಾಖಲಾಗಿದೆ. ಇದಾದ ನಂತರ ಎನ್ಎಂ ಜೋಶಿ ಮಾರ್ಗ್-ಲೋವರ್ ಪರೇಲ್ನಲ್ಲಿ 78.4 ಮಿಮೀ ಮತ್ತು ಪರೇಲ್ ಟಿಟಿಯಲ್ಲಿ 72.63 ಮಿಮೀ ಮಳೆ ದಾಖಲಾಗಿದೆ.
ಶಿವಸೇನೆ ಯುಬಿಟಿ ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರು ಅಂಧೇರಿ ಸಬ್ಬೇಯ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ಆಡಳಿತಾರೂಢ ಬಿಜೆಪಿ ಸರ್ಕಾರದ ಅವ್ಯವಸ್ಥೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.