ರೈಲ್ವೆ ಇತಿಹಾಸದಲ್ಲಿ ಹೊಸ ಮೈಲಿಗಲ್ಲು: ದಕ್ಷಿಣ ಭಾರತದ ನಂಬರ್ 1 ವಂದೇ ಭಾರತ್ ಆಗಿ ಮಂಗಳೂರು-ತಿರುವನಂತಪುರಂ ಎಕ್ಸ್ಪ್ರೆಸ್!

ಮಂಗಳೂರು: ಭಾರತೀಯ ರೈಲ್ವೆಯ ಹೆಮ್ಮೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಪ್ರಯಾಣಿಕರಿಂದ ಅಭೂತಪೂರ್ವ ಪ್ರೋತ್ಸಾಹ ವ್ಯಕ್ತವಾಗುತ್ತಿದ್ದು, ದಕ್ಷಿಣ ರೈಲ್ವೆ ವಲಯದಲ್ಲಿ ತಿರುವನಂತಪುರಂ-ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಗಳಿಕೆಯಲ್ಲಿ ಪ್ರಥಮ ಸ್ಥಾನವನ್ನು ಅಲಂಕರಿಸಿದೆ.

ದಕ್ಷಿಣ ರೈಲ್ವೆ ಬಿಡುಗಡೆ ಮಾಡಿರುವ ಅಧಿಕೃತ ದತ್ತಾಂಶಗಳ ಪ್ರಕಾರ, ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶಗಳನ್ನು ಸಂಪರ್ಕಿಸುವ ಒಟ್ಟು 24 ವಂದೇ ಭಾರತ್ ರೈಲು ಸೇವೆಗಳ ಪೈಕಿ 20632 ತಿರುವನಂತಪುರಂ-ಮಂಗಳೂರು ವಂದೇ ಭಾರತ್ (VB) ಎಕ್ಸ್ಪ್ರೆಸ್ ಅತಿ ಹೆಚ್ಚು ಗಳಿಕೆ ಮಾಡಿದೆ. ಈ ರೈಲು 2025ರ ಆಗಸ್ಟ್ನಿಂದ ಅಕ್ಟೋಬರ್ ಅವಧಿಯಲ್ಲಿ ಬರೋಬ್ಬರಿ ₹73.35 ಲಕ್ಷ ಆದಾಯವನ್ನು ರೈಲ್ವೆ ಇಲಾಖೆಗೆ ತಂದುಕೊಟ್ಟಿದೆ.
ಪ್ರಯಾಣಿಕರ ಬುಕಿಂಗ್ ಸಂಖ್ಯೆಯಲ್ಲೂ ಈ ರೈಲು ಅಗ್ರಸ್ಥಾನದಲ್ಲಿದೆ. ಪರಿಶೀಲನಾ ಅವಧಿಯಲ್ಲಿ ಈ ಮಾರ್ಗದಲ್ಲಿ ಅತಿ ಹೆಚ್ಚು ಅಂದರೆ 11,896 ಬುಕಿಂಗ್ಗಳು ದಾಖಲಾಗಿವೆ. ಇದಕ್ಕೆ ಹೋಲಿಸಿದರೆ 20627 ಚೆನ್ನೈ ಎಗ್ಮೋರ್-ನಾಗರ್ಕೋಯಿಲ್ ವಂದೇ ಭಾರತ್ನಲ್ಲಿ 2,832 ಮತ್ತು 20642 ಕೊಯಮತ್ತೂರು ಜಂಕ್ಷನ್-ಬೆಂಗಳೂರು ಕಂಟೋನ್ಮೆಂಟ್ ವಂದೇ ಭಾರತ್ನಲ್ಲಿ ಕೇವಲ 835 ಬುಕಿಂಗ್ಗಳಾಗಿವೆ ಎಂದು ವರದಿ ಬಹಿರಂಗಪಡಿಸಿದೆ. ಮಂಗಳೂರು-ತಿರುವನಂತಪುರಂ, ಚೆನ್ನೈ ಎಗ್ಮೋರ್-ನಾಗರ್ಕೋಯಿಲ್ ಮತ್ತು ಕಾಸರಗೋಡು-ತಿರುವನಂತಪುರಂ ಮಾರ್ಗಗಳು ನಿರಂತರವಾಗಿ ಶೇ. 100 ಕ್ಕಿಂತ ಹೆಚ್ಚಿನ ಪ್ರಯಾಣಿಕರ ದಟ್ಟಣೆಯನ್ನು (Occupancy) ದಾಖಲಿಸುತ್ತಿವೆ.
ದಕ್ಷಿಣ ರೈಲ್ವೆಯ ವಂದೇ ಭಾರತ್ ಸೇವೆಗಳು ವರ್ಷದಿಂದ ವರ್ಷಕ್ಕೆ ಭಾರಿ ಪ್ರಗತಿ ಕಾಣುತ್ತಿವೆ. 2024-25ರಲ್ಲಿ 54.12 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು, ₹540.65 ಕೋಟಿ ಆದಾಯ ಬಂದಿತ್ತು. ಆದರೆ, 2025-26ರ ಹಣಕಾಸು ವರ್ಷದ ವೇಳೆಗೆ ಇದು ಒಟ್ಟಾರೆಯಾಗಿ 77.38 ಲಕ್ಷ ಪ್ರಯಾಣಿಕರಿಗೆ ಮತ್ತು ₹803.86 ಕೋಟಿ ಆದಾಯಕ್ಕೆ ಏರಿಕೆಯಾಗಿದೆ. ಪ್ರಸಕ್ತ 2026-27ರ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲೇ (ಏಪ್ರಿಲ್-ಮೇ 2026) ಈ ರೈಲುಗಳು ಈಗಾಗಲೇ 15.21 ಲಕ್ಷ ಪ್ರಯಾಣಿಕರನ್ನು ಸಾಗಿಸಿ ₹162.96 ಕೋಟಿ ಗಳಿಕೆ ಮಾಡಿವೆ. ಇದು ದೇಶದಲ್ಲಿ ವಂದೇ ಭಾರತ್ ರೈಲುಗಳಿಗಿರುವ ಬಲವಾದ ಮತ್ತು ನಿರಂತರ ಬೇಡಿಕೆಯನ್ನು ಸಾಬೀತುಪಡಿಸಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ದಕ್ಷಿಣ ರೈಲ್ವೆಯು ಜಾರಿಗೆ ತಂದಿರುವ ವಿಶೇಷ ಉಪಕ್ರಮವೊಂದು ಗಳಿಕೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ರೈಲು ಹೊರಡುವ 15 ನಿಮಿಷಗಳ ಮೊದಲು ಮೂಲ ನಿಲ್ದಾಣಗಳು ಮತ್ತು ಮಾರ್ಗಮಧ್ಯದ ನಿಲ್ದಾಣಗಳಲ್ಲಿ ಖಾಲಿ ಇರುವ ಸೀಟುಗಳನ್ನು ಕಾಯ್ದಿರಿಸಲು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಆಗಸ್ಟ್-ಅಕ್ಟೋಬರ್ 2025 ರ ಅವಧಿಯಲ್ಲಿ ಎಂಟು ಪೈಲಟ್ ರೈಲುಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿದಾಗ, ಪ್ರತಿಯೊಂದು ಮಾರ್ಗದಲ್ಲೂ ಕರೆಂಟ್ ಬುಕಿಂಗ್ ಮೂಲಕ ಪ್ರಯಾಣಿಕರ ಸಂಖ್ಯೆ ಮತ್ತು ಆದಾಯದಲ್ಲಿ ದ್ವಿಗುಣ ಬೆಳವಣಿಗೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.