ಮಣಿಪಾಲ: ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಆಟೋರಿಕ್ಷಾ; ಸ್ಥಳೀಯರಲ್ಲಿ ಆತಂಕ!

ಗುಜರಾತ್ : ಇಲ್ಲಿನ ವಿರ್ಪರ್ಡಾ ಗ್ರಾಮದ ಕೃಷಿ ಜಮೀನೊಂದರಲ್ಲಿರುವ 18 ಅಡಿ ಆಳದ ತೆರೆದ ಬಾವಿಯಲ್ಲಿ ನೀರು ಸಮುದ್ರದ ಅಲೆಗಳಂತೆ ನಿರಂತರವಾಗಿ ಉಕ್ಕಿ ಹರಿಯುತ್ತಿರುವ ವಿಚಿತ್ರ ವಿದ್ಯಮಾನವೊಂದು ಬೆಳಕಿಗೆ ಬಂದಿದೆ. ಈ ವಿಸ್ಮಯವನ್ನು ವೀಕ್ಷಿಸಲು ನೂರಾರು ಗ್ರಾಮಸ್ಥರು ಜಮಾಯಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊಗಳು ಭಾರಿ ವೈರಲ್ ಆಗುತ್ತಿವೆ.

ಗ್ರಾಮದ ಪ್ರಾಣಜೀವನ್ ಸದಾರಿಯಾ ಎಂಬುವವರಿಗೆ ಸೇರಿದ, ಮೂರು ತಿಂಗಳ ಹಿಂದಷ್ಟೇ ತೋಡಲಾಗಿದ್ದ ಬಾವಿಯಲ್ಲಿ ಆಗಸ್ಟ್ 2 ರಿಂದ ನೀರು ಈ ರೀತಿ ಅಲೆಗಳಂತೆ ಚಿಮ್ಮುತ್ತಿದೆ. ಸುತ್ತಮುತ್ತಲಿನ ಬಾವಿಗಳಲ್ಲಿ ನೀರು ಪ್ರಶಾಂತವಾಗಿದ್ದರೂ, ಈ ಒಂದೇ ಬಾವಿಯಲ್ಲಿ ನೀರು ಕುದಿಯುವಂತೆ ಅಲೆ ಏಳುತ್ತಿರುವುದು ಸ್ಥಳೀಯರಲ್ಲಿ ಭೂಕಂಪದ ಮುನ್ಸೂಚನೆಯೋ ಎಂಬ ಆತಂಕ ಸೃಷ್ಟಿಸಿತ್ತು.
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಭೂವಿಜ್ಞಾನಿ ಜೆ.ಎಸ್. ವಧೇರ್ ಹಾಗೂ ಗಾಂಧಿನಗರದ ಇನ್ಸ್ಟಿಟ್ಯೂಟ್ ಆಫ್ ಸೀಸ್ಮೋಲಾಜಿಕಲ್ ರಿಸರ್ಚ್ (ISR) ಸಂಸ್ಥೆಯು ಇದು ಯಾವುದೇ ಭೂಕಂಪನ ಚಟುವಟಿಕೆಯಲ್ಲ, ಬದಲಿಗೆ ಸಂಪೂರ್ಣ ನೈಸರ್ಗಿಕ ಜಲವೈಜ್ಞಾನಿಕ ಪ್ರಕ್ರಿಯೆ ಎಂದು ಸ್ಪಷ್ಟಪಡಿಸಿದೆ.
ವೆಲ್ ಸೈಶ್ (Well Seiche): ಇತ್ತೀಚಿನ ಭಾರಿ ಮಳೆಯಿಂದಾಗಿ ಭೂಗರ್ಭದ ಅಂತರ್ಜಲ ಮಟ್ಟ ಹಠಾತ್ತಾಗಿ ಹೆಚ್ಚಾಗಿದೆ.
ಬಂಡೆಗಳ ರಂಧ್ರಗಳಲ್ಲಿ ಸಿಲುಕಿದ್ದ ಗಾಳಿಯನ್ನು ನೂಕಿ ನೀರು ನುಗ್ಗಿದಾಗ, ಆ ಗಾಳಿಯು ತೀವ್ರ ಒತ್ತಡದೊಂದಿಗೆ ಹೊರಬರಲು ಯತ್ನಿಸಿದೆ.
ಈ ಗಾಳಿಯು ಬಾವಿಯ ಕೆಳಭಾಗದಿಂದ ಜಲಸ್ಥಿತಿಯ ಒತ್ತಡವನ್ನು (Hydrostatic pressure) ಸೃಷ್ಟಿಸುತ್ತಿರುವುದರಿಂದ ನೀರು ಅಲೆಗಳಂತೆ ಚಿಮ್ಮುತ್ತಿದೆ.
ಮೂಢನಂಬಿಕೆಗಳು ಹಾಗೂ ವದಂತಿಗಳು ಹರಡದಂತೆ ತಡೆಯಲು ಮೊರ್ಬಿ ಜಿಲ್ಲಾಧಿಕಾರಿ ಸ್ವಪ್ನಿಲ್ ಖರೆ ಅವರು ಗ್ರೌಂಡ್ ವಾಟರ್ ರಿಸರ್ಚ್ ಇನ್ಸ್ಟಿಟ್ಯೂಟ್ (GWRI) ತಂಡವನ್ನು ವಿಸ್ತೃತ ತನಿಖೆಗೆ ನಿಯೋಜಿಸಿದ್ದಾರೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.