ಹೊಸ ಗ್ರೀನ್‌ಫೀಲ್ಡ್ ಹೆದ್ದಾರಿಯಲ್ಲಿ ಭೀಕರ ಅಪಘಾತ; ತಾಯಿ-ಮಗ ಸಾ*ವು

ಖಮ್ಮಂ: ಜಿಲ್ಲೆಯಲ್ಲಿ ಹೊಸದಾಗಿ ತೆರೆಯಲಾದ ಖಮ್ಮಂ-ದೇವರಪಲ್ಲಿ ಗ್ರೀನ್‌ಫೀಲ್ಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಹಿಳೆ ಮತ್ತು ಅವರ ಮಗ ಸಾವನ್ನಪ್ಪಿದ್ದು, ಇತರ ಇಬ್ಬರು ಗಾಯಗೊಂಡಿದ್ದಾರೆ.
ಜಿಲ್ಲೆಯ ಚಿಂತಕಣಿ ಮಂಡಲದ ಗಾಂಧಿ ನಗರದ ಪೋಕಬಥಿನಿ ಸುಜಾತ (38) ಮತ್ತು ಪವನ್ (17) ಮೃತರು, ಹೈದರಾಬಾದ್ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ ಸಂಭವಿಸಿದೆ. ವಿರುದ್ಧ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ಮಿನಿ ಟ್ರಕ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪವನ್ ಇತ್ತೀಚೆಗೆ ಹೈದರಾಬಾದ್‌ನ ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದಿದ್ದರು. ಕಾರು ಚಲಾಯಿಸುತ್ತಿದ್ದ ಅವರ ತಂದೆ ನರಸಿಂಹ ರಾವ್ ಮತ್ತು ಮಿನಿ ಟ್ರಕ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಸ್ಥಳಾಂತರಿಸಲಾಗಿದೆ. ಅಪಘಾತದಲ್ಲಿ ಎರಡೂ ವಾಹನಗಳು ತೀವ್ರವಾಗಿ ಹಾನಿಗೊಳಗಾಗಿವೆ.
ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಪಲ್ಟಿಯಾದ ನಂತರ ಮಿನಿ ಟ್ರಕ್ ಚಾಲಕ ಕ್ಯಾಬಿನ್ ಒಳಗೆ ಸಿಲುಕಿಕೊಂಡಿದ್ದ. ಮಿನಿ ಟ್ರಕ್ ಅನ್ನು ಮೇಲಕ್ಕೆತ್ತಿ ಚಾಲಕನನ್ನು ರಕ್ಷಿಸಲು ಪೊಲೀಸರು ಕ್ರೇನ್ ಬಳಸಬೇಕಾಯಿತು. ಘಟನೆಗೆ ಸಂಬಂಧಿಸಿದಂತೆ ಖಮ್ಮಂ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಗ್ರೀನ್‌ಫೀಲ್ಡ್ ಹೆದ್ದಾರಿಯನ್ನು ಆಗಸ್ಟ್ 1 ರಂದು ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಇದು ಖಮ್ಮಂ ಜಿಲ್ಲೆಯ ತಲ್ಲಂಪಡುವಿನಲ್ಲಿ ಪ್ರಾರಂಭವಾಗಿ ಆಂಧ್ರಪ್ರದೇಶದ ರಾಜಮಂಡ್ರಿ ಬಳಿಯ ರಾಷ್ಟ್ರೀಯ ಹೆದ್ದಾರಿ 16 ರಲ್ಲಿ ದೇವರಪಲ್ಲಿಯಲ್ಲಿ ಕೊನೆಗೊಳ್ಳುತ್ತದೆ.
ಒಟ್ಟು 165 ಕಿಲೋಮೀಟರ್ ಉದ್ದದ ಈ ಹೆದ್ದಾರಿ ತೆಲಂಗಾಣದಲ್ಲಿ 90 ಕಿಮೀ ಮತ್ತು ಆಂಧ್ರಪ್ರದೇಶದಲ್ಲಿ 75 ಕಿಮೀ ಕ್ರಮಿಸುತ್ತದೆ. ಖಮ್ಮಂ ಜಿಲ್ಲೆಯ ರಸ್ತೆಯಲ್ಲಿರುವ ಟೋಲ್ ಪ್ಲಾಜಾಗಳು, ಪ್ರವೇಶ ಮತ್ತು ನಿರ್ಗಮನ ಬಿಂದುಗಳನ್ನು ಇನ್ನೂ ಸುವ್ಯವಸ್ಥಿತಗೊಳಿಸಲಾಗಿಲ್ಲ.
