ಮಂಗಳೂರು: ದೈವಸ್ಥಾನ ಮತ್ತು ಭಂಡಾರ ಮನೆಯಲ್ಲಿ ಕಳವು ಮಾಡಿದ್ದ ಕುಖ್ಯಾತ ಕಳ್ಳನಿಗೆ 10 ವರ್ಷ ಜೈಲು ಶಿಕ್ಷೆ!

ಮಂಗಳೂರು : ಬಾಳೆಪುಣಿ ಗ್ರಾಮದ ಕಣಂತೂರು ದೈವಸ್ಥಾನ ಮತ್ತು ಭಂಡಾರ ಮನೆಯಲ್ಲಿ ಕಳವು ನಡೆಸಿ ವಿಚಾರಣಾ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದ ಆರೋಪಿಗೆ, ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹60,000 ದಂಡ ವಿಧಿಸಿ ತೀರ್ಪು ನೀಡಿದೆ. ಉಳ್ಳಾಲ ಹಳೇ ಮನೆ ಕಲ್ಲಾಪು ಕಟ್ಟೆಪುಣಿಯ ಅಬ್ದುಲ್ ಬಶೀರ್ ಅಲಿಯಾಸ್ ಕಳ್ಳ ಬಶೀರ್ (36) ಶಿಕ್ಷೆಗೊಳಗಾದ ಅಪರಾಧಿ.

2009ರ ಫೆಬ್ರವರಿ 27ರಂದು ರಾತ್ರಿ ಕಣಂತೂರಿನ ಶ್ರೀ ಕ್ಷೇತ್ರ ತೋಡಕುಕ್ಕಿನಾರ್ ದೈವಸ್ಥಾನದ ಬಾಗಿಲ ಬೀಗ ಮುರಿದು ಒಳಪ್ರವೇಶಿಸಿದ್ದ ಬಶೀರ್, ಕಾಣಿಕೆ ಡಬ್ಬಿಯಲ್ಲಿದ್ದ ನಗದನ್ನು ಕಳವು ಮಾಡಿದ್ದ. ಬಳಿಕ ದೈವಸ್ಥಾನದ ಪಕ್ಕದಲ್ಲಿದ್ದ ಭಂಡಾರ ಮನೆ ಹಾಗೂ ದೈವದ ಕೋಣೆಯ ಬೀಗ ಒಡೆದು, ₹1.20 ಲಕ್ಷ ಮೌಲ್ಯದ 100 ಗ್ರಾಂ ತೂಕದ ಬಂಗಾರ ಹಾಗೂ ಬೆಳ್ಳಿ ಹೊಂದಿದ್ದ 2 ಕಿರುವಾಳ (ಖಡ್ಗ), ₹1.45 ಲಕ್ಷ ಮೌಲ್ಯದ ಬಂಗಾರದ ಹೊದಿಕೆಯಿರುವ ಕಬ್ಬಿಣದ ಬಾಣ, ಬೆಳ್ಳಿಯ ಕಲಶ, ಶಿವನ ಪ್ರತಿಮೆಯ ಸತ್ತಿಗೆ (ಬೆಳ್ಳಿಯ ಹೂ), ದುರ್ಗಾಲಯ ಮೂರ್ತಿಯ ಸತ್ತಿಗೆ ಹಾಗೂ ಕಾಣಿಕೆ ಡಬ್ಬಿಯಲ್ಲಿದ್ದ ನಗದನ್ನು ದೋಚಿದ್ದ. ಕಳವು ಮಾಡಿದ ಸೊತ್ತುಗಳನ್ನು 2ನೇ ಆರೋಪಿಗೆ ಮಾರಾಟ ಮಾಡಿದ್ದ.
ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಬಂಟ್ವಾಳದ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಆರೋಪಿಗಳನ್ನು ಬಿಡುಗಡೆಗೊಳಿಸಿ (ಖುಲಾಸೆ) ಆದೇಶಿಸಲಾಗಿತ್ತು.
ವಿಚಾರಣಾ ನ್ಯಾಯಾಲಯದ ಬಿಡುಗಡೆ ಆದೇಶವನ್ನು ಪ್ರಶ್ನಿಸಿ ಪ್ರೊಸಿಕ್ಯೂಷನ್ ಪರವಾಗಿ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ತ್ವರಿತ ನ್ಯಾಯಾಲಯವು, ಎರಡೂ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿ, ಆರೋಪಿ ಬಶೀರ್ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಕೆಳ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ 10 ವರ್ಷ ಕಠಿಣ ಶಿಕ್ಷೆ ವಿಧಿಸಿದೆ.