ಹೃದಯಾಘಾತ ಸಾವು ತಡೆಗೆ ಮಹತ್ವದ ಹೆಜ್ಜೆ: ರಾಜ್ಯಾದ್ಯಂತ ಪುನೀತ್ ಹೃದಯಜ್ಯೋತಿ ವಿಸ್ತರಣೆ

ಮಂಗಳೂರು:ಹಠಾತ್ ಹೃದಯಾಘಾತದಿಂದ ಉಂಟಾಗುವ ಸಾವು ಪ್ರಕರಣಗಳನ್ನು ತಡೆಗಟ್ಟಲು ಈಗಾಗಲೇ ರಾಜ್ಯದ ಕೆಲವು ಜಿಲ್ಲೆಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಜಾರಿಯಲ್ಲಿರುವ ಪುನೀತ್ ಹೃದಯಜ್ಯೋತಿ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದೆ ಎಂದು ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಮಂಗಳೂರು ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈವರೆಗೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕು ಸೇರಿದಂತೆ 86 ಕೇಂದ್ರಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯಡಿ ಈಗಾಗಲೇ 14,94,578 ಇಸಿಜಿ ನಡೆಸಲಾಗಿದ್ದು, ಹಾಗೂ 22579 ಸ್ಟೆಮಿ ಪ್ರಕರಣಗಳಿಗೆ ಚಿಕಿತ್ಸೆ ಒದಗಿಸಿ ಪ್ರಾಣ ರಕ್ಷಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದರು.
ಎದೆನೋವು ಅಥವಾ ಹೃದಯ ಸಂಬಂಧಿ ಲಕ್ಷಣಗಳು ಕಂಡುಬಂದಾಗ ಸಮೀಪದ ತಾಲೂಕು ಆಸ್ಪತ್ರೆಗೆ ತೆರಳಿ ದಾಗ ಉಚಿತವಾಗಿ ಇಸಿಜಿ ಪರೀಕ್ಷೆ ನಡೆಸಲಾಗುತ್ತದೆ. ವರದಿಯಲ್ಲಿ ವ್ಯತ್ಯಾಸ ಕಂಡುಬಂದಾಗ ತಕ್ಷಣವೇ ದುಬಾರಿ ಜೀವರಕ್ಷಕ ಇಂಜೆಕ್ಷನ್ ನೀಡಿ ಮುಂದಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಲಪತ್ರೆ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆ ಗಳಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳ ಅನುಕೂಲಕ್ಕಾಗಿ ರಾಜ್ಯಾದ್ಯಂತ ಒಟ್ಟು 169 ಸರ್ಕಾರಿ ಡಯಾಲಿ ಸಿಸ್ ಕೇಂದ್ರಗಳಲ್ಲಿ 639 ಡಯಾಲಿಸಿಸ್ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ವಾರ್ಷಿಕ 5 ಲಕ್ಷ ಡಯಾಲಿಸ್ ಸೆಷನ್ಸ್‌ಗಳನ್ನು ನಡೆಸಲಾಗುತ್ತಿದೆ. ಡಯಾಲೈಸರ್ ಫಿಲ್ಟರ್‌ಗಳನ್ನು ಶುದ್ದೀಕರಿಸಿ ಮರು ಬಳಕೆ ಮಾಡಲಾಗುತ್ತಿದ್ದು ರೋಗಿಗಳ ಸುರಕ್ಷತೆ ಮತ್ತು ಗುಣಮಟ್ಟದ ಚಿಕಿತ್ಸೆಯ ದೃಷ್ಟಿಯಿಂದ, ಸರ್ಕಾರಿ ಡಯಾಲಿಸಿಸ್ ಕೇಂದ್ರಗಳಲ್ಲಿ ಬಳಸುವ ಡಯಲೈಸರ್ ಉಪಕರಣವನ್ನು ಕೇವಲ ಒಂದು ಬಾರಿ ಮಾತ್ರ ಬಳಸಲು (ಒನ್ ಟೈಮ್ ಯೂಸ್) ನಿರ್ಧರಿಸಲಾಗಿದೆ. ಇದಕ್ಕೆ ಪೂರಕವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಯು.ಟಿ. ಖಾದರ್ ಮಾಹಿತಿ ನೀಡಿದರು.
ಮಹಿಳೆಯರನ್ನು ಕಾಡುತ್ತಿರುವ ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿ ತಪಾಸಣೆಗೆ ಎಐ ಆಧರಿತ ಯಂತ್ರವನ್ನು ಖರೀದಿಸಲು ತೀರ್ಮಾನಿಸಲಾಗಿದೆ. ಅಂದಾಜು 30 ಲಕ್ಷ ರೂ. ವೆಚ್ಚದ ಈ ಎಐ ಆಧರಿತ ಯಂತ್ರವನ್ನು ಎಲ್ಲಾ ಜಿಲ್ಲಾ ಆಸ್ಪತ್ರೆ ಗಳಿಗೂ ಒದಗಿಸಲು ನಿರ್ಧರಿಸಲಾಗಿದೆ. ಆಶಾ ಕಾರ್ಯಕರ್ತೆಯರು, ಎಎನ್‌ಎಂ ಹಾಗೂ ಸಿಎಚ್‌ಒಗಳ ನೆರವಿನಿಂದ ಗ್ರಾಮೀಣ NET ಮಹಿಳೆಯರಲ್ಲಿ ಅರಿವು ಮೂಡಿಸಿ ರೋಗ ಲಕ್ಷಣ ಹೊಂದಿರುವವರಿಗೆ ಈ ಯಂತ್ರದ ಮೂಲಕ ಉಚಿತ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು ಮುಂದಿನ ದಿನಗಳಲ್ಲಿ ಮೊಬೈಲ್ ಆಧಾರಿತ ಎಐ ತಂತ್ರಜ್ಞಾನದ ಮೂಲಕ ಬಾಯಿ ಕ್ಯಾನ್ಸರ್ ಪತ್ತೆಹಚ್ಚುವ ವ್ಯವಸ್ಥೆಯನ್ನೂ ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.
ಹಿಮೋಫಿಲಿಯಾ ರೋಗಿಗಳಲ್ಲಿ ಯಾವುದೇ ಕ್ಷಣದಲ್ಲಾದರೂ ರಕ್ತಸ್ರಾವ ಉಂಟಾಗುವ ಅಪಾಯವಿದೆ. ಸದ್ಯ ರಕ್ತ ಸ್ರಾವ ಆರಂಭವಾದ ಬಳಿಕ ದುಬಾರಿ ಬೆಲೆಯ ಫ್ಯಾಕ್ಟರ್ 7 ಮತ್ತು ಫ್ಯಾಕ್ಟರ್ 8 ಇಂಜೆಕ್ಷನ್ ನೀಡಲಾಗುತ್ತದೆ. ಇದೀಗ ಕುಸುಮ ಸಂಜೀವಿನಿ ಯೋಜನೆಯಡಿ ಬಿಪಿಎಲ್ ಕಾರ್ಡ್ ಹಂದಿರುವ ಹಿಮೋಫೀಲಿಯಾ ರೋಗಿಗಳಿಗೆ ರಕ್ತಸ್ರಾವ ಆಗದಂತೆ ತಡೆಯಲು ಪ್ರತಿ ತಿಂಗಳು ಮುಂಚಿತವಾಗಿಯೇ ಇಂಜೆಕ್ಷನ್ ನೀಡಿ ರಕ್ತಸ್ರಾವ ಆಗದಂತೆ ನಿಯಂತ್ರಿಸಲು ಕ್ರಮ ವಹಿಸಲಾಗುವುದು. ಇದು ದುಬಾರಿ ವೆಚ್ಚವನ್ನು ನಿಯಂತ್ರಿಸುವ ಜತೆಗೆ ರೋಗಿಗಳಲ್ಲಿ ರಕ್ತಸ್ರಾವ ಆಗುವುದನ್ನು ತಡೆಯಲಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.