ಕುಂದಾಪುರ: ಶಾರ್ಟ್ ಸರ್ಕ್ಯೂಟ್‌ನಿಂದ ಇಡೀ ದಿನಸಿ ಅಂಗಡಿ ಸುಟ್ಟು ಭಸ್ಮ; 40 ಲಕ್ಷಕ್ಕೂ ಅಧಿಕ ನಷ್ಟ!

ಕುಂದಾಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಇಡೀ ದಿನಸಿ ಅಂಗಡಿ ಸುಟ್ಟು ಭಸ್ಮವಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆಯ ಶ್ರೀ ಬ್ರಹ್ಮಸ್ಥಾನ ಸಮೀಪದ ಗುರು ಬ್ರಹ್ಮ ಜನರಲ್ ಸ್ಟೋರ್ ನಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ.

ಮಂಗಳವಾರ ಮುಂಜಾನೆ ಸುಮಾರು 1.30 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಅಂಗಡಿ ಮಾಲೀಕ ಸಂತೋಷ್ ಅವರು ಎಂದಿನಂತೆ ಅಂಗಡಿ ಮುಚ್ಚಿ ಮನೆಗೆ ತೆರಳಿದ ಬಳಿಕ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಇಡೀ ಅಂಗಡಿಗೆ ವ್ಯಾಪಿಸಿದೆ.ಅಗ್ನಿ ಅವಘಡದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ದಿನಸಿ ಸಾಮಗ್ರಿಗಳು, ಫ್ರಿಜ್‌ಗಳು, ಪೀಠೋಪಕರಣಗಳು ಸೇರಿದಂತೆ ಅಂಗಡಿಯಲ್ಲಿದ್ದ ಬಹುತೇಕ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ. ಈ ಅಗ್ನಿ ಅವಘಡದಿಂದ 40 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.ಪ್ರಾಥಮಿಕ ಮಾಹಿತಿಯ ಪ್ರಕಾರ, ಅಂಗಡಿಯಲ್ಲಿದ್ದ ಮೂರುಕ್ಕೂ ಹೆಚ್ಚು ಫ್ರಿಜ್‌ಗಳಲ್ಲಿ ಒಂದರಲ್ಲಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕುಂದಾಪುರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅಗ್ನಿ ನಂದಿಸುವ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.