ಕೇರಳ: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಅಜ್ಜನನ್ನೇ ಹತ್ಯೆಗೈದ 13 ವರ್ಷದ ಮೊಮ್ಮಗಳು; ಪ್ರಿಯಕರ ಹಾಗೂ ಸ್ನೇಹಿತರೊಂದಿಗೆ ಸೇರಿ ಕೃತ್ಯ!

ಆಲಪ್ಪುಳ (ಕೇರಳ) : ಮೊಬೈಲ್ ಫೋನ್ ಅತಿಯಾಗಿ ಬಳಸಬೇಡ ಹಾಗೂ ತಡವಾಗಿ ಮನೆಗೆ ಬರಬೇಡ ಎಂದು ಗದರಿಸಿದ್ದಕ್ಕೆ ಅಜ್ಜನ ಮೇಲಿದ್ದ ದ್ವೇಷದಿಂದ, 13 ವರ್ಷದ ಬಾಲಕಿಯೊಬ್ಬಳು ತನ್ನ ಪ್ರಿಯಕರ ಹಾಗೂ ಇತರ ಹದಿಹರೆಯದ ಸ್ನೇಹಿತರ ಜೊತೆ ಸೇರಿ ಅಜ್ಜನನ್ನೇ ಭೀಕರವಾಗಿ ಹತ್ಯೆ ಮಾಡಿಸಿರುವ ಘಟನೆ ಕೇರಳದ ಆಲಪ್ಪುಳ ಜಿಲ್ಲೆಯ ಕರುವತ್ತದಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 13 ವರ್ಷದ ಮೊಮ್ಮಗಳು ಸೇರಿದಂತೆ ನಾಲ್ವರು ಹದಿಹರೆಯದವರನ್ನು ಪೊಲೀಸರು ಬಂಧಿಸಿದ್ದಾರೆ. ಕರುವತ್ತದ ಬಾಡಿಗೆ ಮನೆಯಲ್ಲಿದ್ದ 65 ವರ್ಷದ ಶಿವನ್‌ಕುಟ್ಟಿ ಚೆಟ್ಟಿಯಾರ್ ಕೊಲೆಯಾದ ದುರ್ದೈವಿ. ಬಾಲಕಿಯ ತಾಯಿ ತನ್ನ ಎರಡನೇ ಮಗುವಿನ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾಗ, ಅಜ್ಜ ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ಗಮನಿಸಿದ ಬಾಲಕಿ ತನ್ನ ಪ್ರಿಯಕರನಿಗೆ ಕರೆ ಮಾಡಿ ಹತ್ಯೆಗೆ ಸಂಚು ರೂಪಿಸಿದ್ದಳು. ಮನೆಗೆ ಕಳ್ಳರು ನುಗ್ಗಿದ್ದಾರೆ ಎಂದು ಬಿಂಬಿಸಲು ವೀಡಿಯೊ ಕಾಲ್ ಮೂಲಕ ಪ್ರಿಯಕರ ಹಾಗೂ ಆತನ ಸ್ನೇಹಿತರಿಗೆ ಮನೆಯ ಪ್ರವೇಶದ್ವಾರ, ಬಾಗಿಲು ಹಾಗೂ ಅಜ್ಜನ ಚಲನವಲನದ ಮಾಹಿತಿ ನೀಡಿದ್ದಳು.
ಭಾನುವಾರ ರಾತ್ರಿ ವೆಂಟಿಲೇಟರ್ ಮೂಲಕ ಮನೆಗೆ ನುಗ್ಗಿದ ಹದಿಹರೆಯದ ಯುವಕರು, ಎಚ್ಚರಗೊಂಡ ಅಜ್ಜನ ಮೇಲೆ ಹಲ್ಲೆ ನಡೆಸಿ, ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಂದಿದ್ದಾರೆ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಕಳ್ಳರು ತಂದ ಆಯುಧ ಅಥವಾ ಹಗ್ಗಗಳ ಬದಲಿಗೆ ಮನೆಯಲ್ಲಿದ್ದ ಲುಂಗಿ-ಬಟ್ಟೆಗಳಿಂದ ಅಜ್ಜನನ್ನು ಕಟ್ಟಿಹಾಕಿರುವುದು ಅನುಮಾನ ಮೂಡಿಸಿತು. ಜೊತೆಗೆ ಬಾಲಕಿಯ ಕೋಣೆ ಮಾತ್ರ ಸುಸ್ಥಿತಿಯಲ್ಲಿದ್ದು, ಉಳಿದ ರೂಮ್ ಅಸ್ತವ್ಯಸ್ತವಾಗಿದ್ದದ್ದು ಹಾಗೂ ಬಾಲಕಿಯ ನೀಡಿದ ವಿರೋಧಾತ್ಮಕ ಹೇಳಿಕೆಗಳು ಪೊಲೀಸರ ಅನುಮಾನವನ್ನು ಹೆಚ್ಚಿಸಿದವು.
ಬಾಲಕಿಯ ಕಾಲ್ ಹಿಸ್ಟರಿ ಪರಿಶೀಲಿಸಿದಾಗ ಅಸಲಿ ಕಹಾನಿ ಬಯಲಾಗಿದ್ದು, ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. “ತನ್ನ ಅಜ್ಜನನ್ನು ಕೊಲ್ಲಲೇಬೇಕು ಎಂಬ ಸ್ಪಷ್ಟ ಸಂದೇಶವನ್ನು ಬಾಲಕಿ ನೀಡಿದ್ದಳು. ದೋಚಿದ ಹಣದಲ್ಲಿ ಸ್ನೇಹಿತನ ಮದುವೆಗೆ ಉಡುಗೊರೆ ನೀಡಲು ಹಾಗೂ ವೈಯಕ್ತಿಕ ವೆಚ್ಚಕ್ಕೆ ಬಳಸಲು ಯೋಜಿಸಿದ್ದರು” ಎಂದು ಆಲಪ್ಪುಳ ಜಿಲ್ಲಾ ಪೊಲೀಸ್ ಮುಖ್ಯಸ್ಥ ವಿಷ್ಣು ಪ್ರತೀಪ್ ಟಿಕೆ ತಿಳಿಸಿದ್ದಾರೆ.