ರೈಲಿನಲ್ಲಿ ಪುರುಷರ ಕಾಟದ ಬಗ್ಗೆ ಕೊನೆಯ ಮೆಸೇಜ್ ಕಳುಹಿಸಿದ್ದ ಅಸ್ಸಾಂ ನೃತ್ರ್ಯಗಾರ್ತಿ ಶವವಾಗಿ ಪತ್ತೆ!

ಅಮರಾವತಿ: ರೈಲಿನಲ್ಲಿ (Train) ‘ನನ್ನ ಸುತ್ತಲೂ ಪುರುಷರೇ ಇದ್ದಾರೆ’ ಎಂದು ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ಕೊನೆಯ ಮೆಸೇಜ್ ಕಳಿಸಿದ್ದ ಅಸ್ಸಾಂನ (Assam) ಡ್ಯಾನ್ಸರ್ (Dancer) ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.ಅಸ್ಸಾಂನ ಕಾಮರೂಪ್ ಜಿಲ್ಲೆಯ 20 ವರ್ಷದ ಯುವತಿ ವಿಶಾಖಪಟ್ಟಣದಲ್ಲಿ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು. ಕಾರ್ಯಕ್ರಮ ಮುಗಿಸಿ, ಅ.10 ರಂದು ಗುವಾಹಟಿಯಲ್ಲಿ ಬ್ಯಾಂಕ್ ಪರೀಕ್ಷೆ ಇದ್ದಿದ್ದರಿಂದ ಮನೆಗೆ ಮರಳಲು ನಿರ್ಧರಿಸಿದ್ದಳು. ‘ದಿಬ್ರುಗಢ್ ವಿವೇಕ್ ಎಕ್ಸ್ಪ್ರೆಸ್’ ರೈಲಿನಲ್ಲಿ ವಾಪಸ್ ಆಗುವಾಗ ನಾಪತ್ತೆಯಾಗಿದ್ದಳು. ಆಕೆಯ ಶವ ಶ್ರೀಕಾಕುಳಂ ಜಿಲ್ಲೆಯಲ್ಲಿ ರೈಲು ಹಳಿ ಪಕ್ಕದಲ್ಲಿ ಪತ್ತೆಯಾಗಿದೆ. ಮೃತ ಯುವತಿಯನ್ನು ಬುಡಕಟ್ಟು ಸಮುದಾಯಕ್ಕೆ ಸೇರಿದವಳು ಮತ್ತು ಗುವಾಹಟಿಯ ಬಿ. ಬೊರುವಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು ಎಂದು ತಿಳಿದುಬಂದಿದೆ. ಅ.5ರ ಸಂಜೆ, ಸಿಲ್ಚಾರ್ ಎಕ್ಸ್ಪ್ರೆಸ್ಗಾಗಿ ಆನ್ಲೈನ್ನಲ್ಲಿ ತತ್ಕಾಲ್ ಟಿಕೆಟ್ ಕಾಯ್ದಿರಿಸಲು ಪ್ರಯತ್ನಿಸಿದ್ದಳು. ಕಾಯ್ದಿರಿಸುವಿಕೆ (Reservation) ಖಚಿತಗೊಂಡಿರಲಿಲ್ಲ. ಬಳಿಕ ವಿಶಾಖಪಟ್ಟಣ ರೈಲು ನಿಲ್ದಾಣಕ್ಕೆ ತೆರಳಿ ಅಸ್ಸಾಂಗೆ ಹೋಗುವ ವಿವೇಕ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ 22503) ಹತ್ತಿದ್ದಳು.

ಯುವತಿಯ ತಾಯಿಯ ದೂರಿನ ಪ್ರಕಾರ, ಅಕ್ಟೋಬರ್ 5 ರ ರಾತ್ರಿ 11:50 ಕ್ಕೆ ರೈಲು ಹತ್ತಿದ್ದಳು. ರೈಲು ವಿಶಾಖಪಟ್ಟಣದಿಂದ ರಾತ್ರಿ 12:10 ಕ್ಕೆ ಹೊರಟಿತ್ತು. ಅಕ್ಟೋಬರ್ 7 ರಂದು ಬೆಳಿಗ್ಗೆ 9:05 ಕ್ಕೆ ಗುವಾಹಟಿಯನ್ನು ತಲುಪಬೇಕಿತ್ತು. ಪ್ರಯಾಣದ ಸಮಯದಲ್ಲಿ, ತಮ್ಮ ಸ್ನೇಹಿತರಿಗೆ ಬೋಗಿಯಲ್ಲಿನ ವಿಪರೀತ ಜನಸಂದಣಿಯ ಬಗ್ಗೆ ತಿಳಿಸಿದ್ದಳು. ಅಲ್ಲದೇ ತಮ್ಮ ಸುತ್ತಲೂ ಹೆಚ್ಚಾಗಿ ಪುರುಷ ಪ್ರಯಾಣಿಕರೇ ಇದ್ದಿದ್ದರಿಂದ ಭಯಗೊಂಡಿದ್ದಾಗಿ ಹೇಳಿದ್ದಳು.