ಹುಬ್ಬಳ್ಳಿ: ಫ್ಲೈಓವರ್ ಕಾಮಗಾರಿಯ ಭೀಕರ ನಿರ್ಲಕ್ಷ್ಯ; ಕಬ್ಬಿಣದ ರಾಡ್ ಬಿದ್ದು ವೃದ್ಧೆ ತಲೆಗೆ ತೀವ್ರ ಗಾಯ!

ಹುಬ್ಬಳ್ಳಿ: ನಗರದ ಹೊಸೂರು ವೃತ್ತದ ಪಡುರಂಗಿ ಬಿಲ್ಡಿಂಗ್ ಸಮೀಪ ನಡೆಯುತ್ತಿರುವ ಫೈಓವರ್ ಕಾಮಗಾರಿಯಲ್ಲಿ ಅವಘಡ ಸಂಭವಿಸಿದ್ದು, ಕಬ್ಬಿಣದ ರಾಡ್ ತಲೆಯ ಮೇಲೆ ಬಿದ್ದ ಪರಿಣಾಮ ಪಾದಚಾರಿ ವೃದ್ಧ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.
ಗಾಯಗೊಂಡ ಮಹಿಳೆಯನ್ನು ಯಶೋಧಾ ಜಾಧವ ಎಂದು ಗುರುತಿಸಲಾಗಿದೆ. ಇವರು ಮೂಲತಃ ಶಿಗ್ಗಾಂವ ತಾಲೂಕಿನ ತವರುಮಳಳ್ಳಿ ಗ್ರಾಮದವರಾಗಿದ್ದು. ಹುಬ್ಬಳ್ಳಿಯ ನವನಗರದಲ್ಲಿರುವ ಮಗಳ ಮನೆಗೆ ಹೊರಟಿದ್ದರು. ರಸ್ತೆ ಬದಿಯ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮೇಲ್ಬಾಗದಲ್ಲಿ ನಡೆಯುತ್ತಿದ್ದ ಕಾಮಗಾರಿಯಿಂದ ಕಬ್ಬಿಣದ ರಾಡ್ ಆಕಸ್ಮಿಕವಾಗಿ ಯಶೋಧಾ ಅವರ ಮೈಮೇಲೆ ಬಿದ್ದಿದೆ. ಇದರಿಂದ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾಮಗಾರಿ ಸ್ಥಳದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಯಾವುದೇ ಮುಂಜಾಗ್ರತಾ ವ್ಯವಸ್ಥೆ ಅಥವಾ ಸಾರ್ವಜನಿಕರ ಸುರಕ್ಷತೆಗೆ ಬೇಕಾದ ತಡೆಗೋಡೆಗಳನ್ನು ಸಮರ್ಪಕವಾಗಿ ಅಳವಡಿಸದೇ ಕಾಮಗಾರಿ ನಡೆಸುತ್ತಿರುವ ಆರೋಪ ಕೇಳಿಬಂದಿದೆ.
ಘಟನೆ ನಡೆದ ಕೂಡಲೇ ಸ್ಥಳದಲ್ಲಿದ್ದ ಕೆಲ ಕಾರ್ಮಿಕರು ಅಲ್ಲಿಂದ ತೆರಳಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಈ ನಿರ್ಲಕ್ಷ್ಯದಿಂದ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗುತ್ತಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ಫೈಓವರ್ ಕಾಮಗಾರಿ ವೇಳೆ ಕಳೆದ ವರ್ಷ ಸಂಭವಿಸಿದ್ದ ದುರಂತದಲ್ಲಿ ಎಎ ನೇಮಿರಾಜ್ ಮೃತಪಟ್ಟಿದ್ದರು. ಆ ಘಟನೆ ಬಳಿಕವೂ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರದಿರುವುದು ಇದೀಗ ಮತ್ತೆ ಪ್ರಶ್ನೆಗೆ ಕಾರಣವಾಗಿದೆ.
ಈ ಘಟನೆ ಹಿನ್ನೆಲೆಯಲ್ಲಿ ಕಾಮಗಾರಿ ನಿರ್ವಹಿಸುತ್ತಿರುವ ಝಂಡು ಸಂಸ್ಥೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಕಿಮ್ಸ್ ಆಸ್ಪತ್ರೆಗೆ ಬೇಟೆ ನೀಡಿ ಪ್ರಕರಣದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.