28ರ ಹರೆಯದಲ್ಲೇ ಶ್ವೇತಾ ಬದುಕಿಗೆ ತೆರೆ: ಅಂಗಾಂಗ ದಾನದಿಂದ ಮಾದರಿಯಾದ ಕುಟುಂಬ!

ಕೋಲಾರ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಯುವತಿಯೊಬ್ಬಳು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ. ಹೆತ್ತ ಕರುಳನ್ನು ಕಳೆದುಕೊಂಡ ತೀವ್ರ ದುಃಖದ ನಡುವೆಯೂ ಆಕೆಯ ಪೋಷಕರು ಅಂಗಾಂಗ ದಾನ(Organ Donation) ಮಾಡುವ ಮೂಲಕ ಇಬ್ಬರ ಬಾಳಿಗೆ ಹೊಸ ಬೆಳಕಾಗಿದ್ದಾರೆ.

ಕೆಲ ದಿನಗಳ ಹಿಂದೆ ಕೋಲಾರ ಜಿಲ್ಲೆಯ ಕೆಜಿಎಫ್ ಮೂಲದ ಶ್ವೇತಾ (28) ಅವರಿಗೆ ಅಪಘಾತವಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಶ್ವೇತಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಸತತ ಪ್ರಯತ್ನ ನಡೆಸಿದರೂ ಚಿಕಿತ್ಸೆ ಫಲಕಾರಿಯಾಗದೆ, ಆಕೆ ಮೆದುಳು ನಿಷ್ಕ್ರಿಯ(Brain Dead) ಆಗಿರುವುದಾಗಿ ವೈದ್ಯರು ಘೋಷಿಸಿದರು.
ಮಗಳು ಬದುಕುವುದಿಲ್ಲ ಎಂಬ ಆಘಾತ ಮತ್ತು ತೀವ್ರ ದುಃಖದ ನಡುವೆಯೂ, ಶ್ವೇತಾ ಅವರ ಪೋಷಕರು ದಿಟ್ಟ ಹಾಗೂ ಮಾನವೀಯ ನಿರ್ಧಾರ ಕೈಗೊಂಡರು. ಮಗಳ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ಸೂಚಿಸಿದರು. ಅದರಂತೆ ಶ್ವೇತಾ ಅವರ ಲಿವರ್ (ಯಕೃತ್ತು) ಹಾಗೂ ಹೃದಯದ ಕವಾಟುಗಳನ್ನು (Heart Valves) ದಾನ ಮಾಡಲಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಇಬ್ಬರು ರೋಗಿಗಳಿಗೆ ಮರುಜನ್ಮ ನೀಡಲಾಗಿದೆ.
ಮಗಳನ್ನು ಕಳೆದುಕೊಂಡ ದುಃಖದಲ್ಲೂ ಸಮಾಜಕ್ಕೆ ಮಾದರಿಯಾದ ಶ್ವೇತಾ ಪೋಷಕರ ಈ ಮಹತ್ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಆರೋಗ್ಯ ಸಚಿವರೂ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, “ಮಗಳನ್ನು ಕಳೆದುಕೊಂಡ ದುಃಖದಲ್ಲೂ ಮತ್ತೊಬ್ಬರ ಬಾಳಿಗೆ ಬೆಳಕಾದ ಶ್ವೇತಾ ಅವರ ಪೋಷಕರ ಕಾರ್ಯ ನಿಜಕ್ಕೂ ಶ್ಲಾಘನೀಯ ಹಾಗೂ ಪ್ರೇರಣಾದಾಯಕ” ಎಂದು ಬರೆದು ಕುಟುಂಬದ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.