ಭಾರತ-ಆಸ್ಟ್ರೇಲಿಯಾ ಐತಿಹಾಸಿಕ ಒಪ್ಪಂದ: ಯುರೇನಿಯಂ ಪೂರೈಕೆಗೆ ಗ್ರೀನ್ ಸಿಗ್ನಲ್!

ಮೆಲ್ಬರ್ನ್ : ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಪನೀಸ್ ಅವರು ಐತಿಹಾಸಿಕ ಯುರೇನಿಯಂ ಪೂರೈಕೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದರೊಂದಿಗೆ ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳು ರಕ್ಷಣೆ, ಕಡಲ ಭದ್ರತೆ ಮತ್ತು ಇಂಧನ ವಲಯದಲ್ಲಿ ತಮ್ಮ ಪರಸ್ಪರ ಸಹಕಾರವನ್ನು ಮತ್ತಷ್ಟು ವಿಸ್ತರಿಸಲಿವೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಭಾರತದ ಪ್ರಧಾನಮಂತ್ರಿ ಮೋದಿ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಟನೀಸ್ ಅವರನ್ನು ಮೆಲ್ಲೋರ್ನ್ನಲ್ಲಿ ಭೇಟಿಯಾದರು. ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳು 2022ರಲ್ಲಿ ಸಹಿ ಹಾಕಿದ್ದ ಮಧ್ಯಂತರ ವ್ಯಾಪಾರ ಒಪ್ಪಂದದ ಮುಂದುವರಿದ ಭಾಗವಾಗಿ, ಸಮಗ್ರ ಆರ್ಥಿಕ ಸಹಕಾರ ಒಪ್ಪಂದದ (ಸಿಇಸಿಎ) ಮಾತುಕತೆಗಳನ್ನು ವೇಗಗೊಳಿಸಲು ಮತ್ತು ದ್ವಿಪಕ್ಷೀಯ ಹೂಡಿಕೆ ಒಪ್ಪಂದದತ್ತ ಮುನ್ನಡೆಯಲು ಸಮ್ಮತಿಸಿವೆ.

ಪರಮಾಣು ವಿದ್ಯುತ್ ಕಾರ್ಯಕ್ರಮಕ್ಕೆ ಉತ್ತೇಜನ ನೀಡಲು ಆಸ್ಟ್ರೇಲಿಯಾದಿಂದ ಯುರೇನಿಯಂ ಪೂರೈಕೆ ಮಾಡುವ ಐತಿಹಾಸಿಕ ಒಪ್ಪಂದವನ್ನು ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳು ಗುರುವಾರ ಅಂತಿಮಗೊಳಿಸಿವೆ. 2015ರಲ್ಲಿ ಜಾರಿಗೆ ಬಂದ ದ್ವಿಪಕ್ಷೀಯ ‘ಪರಮಾಣು ಸಹಕಾರ ಒಪ್ಪಂದ’ದ ಅಡಿಯಲ್ಲಿ ಮಾಡಿಕೊಳ್ಳಲಾದ ಆಡಳಿತಾತ್ಮಕ ವ್ಯವಸ್ಥೆಯು ಶಾಂತಿಯುತ ಉದ್ದೇಶಗಳಿಗಾಗಿ ಯುರೇನಿಯಂ ರಫ್ತು ಮಾಡಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗಿದೆ.
ಈ ಯುರೇನಿಯಂ ರಫ್ತು ಯಾವಾಗ ಪ್ರಾರಂಭವಾಗುತ್ತದೆ ಎಂಬ ಕಾಲಮಿತಿ ಅಥವಾ ಎಷ್ಟು ಪ್ರಮಾಣದ ಯುರೇನಿಯಂ ಪೂರೈಕೆಯಾಗಲಿದೆ ಎಂಬ ವಿವರಗಳನ್ನು ಉಭಯ ನಾಯಕರು ಬಹಿರಂಗಪಡಿಸಿಲ್ಲ ಎಂದು ಹಿಂದುಸ್ಥಾನ್ ಟೈಮ್ಸ್ ವರದಿಯು ತಿಳಿಸಿದೆ.
“ಭಾರತದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳ ವಿದ್ಯುತ್ ಸಾಮರ್ಥ್ಯದ ಪಾಲನ್ನು ಹೆಚ್ಚಿಸಲು ಈ ಒಪ್ಪಂದವು ಭಾರತಕ್ಕೆ ಆಸ್ಟ್ರೇಲಿಯಾದ ಯುರೇನಿಯಂ ರಫ್ತನ್ನು ಸುಲಭಗೊಳಿಸುತ್ತದೆ ಮತ್ತು ಆಸ್ಟ್ರೇಲಿಯಾದ ಸಂಪನ್ಮೂಲ ವಲಯಕ್ಕೆ ಹೆಚ್ಚುವರಿ ಮಾರುಕಟ್ಟೆಯನ್ನು ಒದಗಿಸುತ್ತದೆ,’ ಎಂದು ಆಸ್ಟ್ರೇಲಿಯಾದ ಪ್ರಧಾನಿ ಅಲ್ಪನೀಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆಸ್ಟ್ರೇಲಿಯಾ ದೇಶವು ವಿಶ್ವದಲ್ಲೇ ಅತಿ ದೊಡ್ಡ ಯುರೇನಿಯಂ ನಿಕ್ಷೇಪವನ್ನು ಹೊಂದಿದೆ. ಅದು ಜಾಗತಿಕ ಒಟ್ಟು ಪ್ರಮಾಣದ ಸುಮಾರು ಮೂರನೇ ಒಂದು ಭಾಗವಾಗಿದೆ. ಆದಾಗ್ಯೂ, ಅದು ಇದುವರೆಗೆ 2017ರಲ್ಲಿ ಕೇವಲ ಒಂದು ಬಾರಿ ಮಾತ್ರ ಭಾರತಕ್ಕೆ ಯುರೇನಿಯಂ ಅನ್ನು ರಫ್ತು ಮಾಡಿದೆ.