ಹಾಸನ: ಮೊಬೈಲ್ ಕೊಡಿಸಲಿಲ್ಲ ಎಂದು ಮನನೊಂದು 13 ವರ್ಷದ ಬಾಲಕ ನೇಣಿಗೆ ಶರಣು!

ಹಾಸನ: ಹಾಸನ ಹೊರವಲಯದ ಯಡಿಯೂರು ಗ್ರಾಮದಲ್ಲಿ ತಂದೆ ಮೊಬೈಲ್ ಕೊಡಿಸಲಿಲ್ಲ ಅಂತ 13 ವರ್ಷದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಪ್ರೀತಂ (13) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕ. ಪ್ರೀತಂ ಚಿತ್ರದುರ್ಗದ ಶ್ರೀನಿವಾಸ್-ಗೌರಮ್ಮ ದಂಪತಿ ಪುತ್ರನಾಗಿದ್ದು, ಕುಟುಂಬ ಸಮೇತ ಯಡಿಯೂರಿನಲ್ಲಿ ನಿರ್ಮಾಣವಾಗುತ್ತಿದ್ದ ಖಾಸಗಿ ಲೇಔಟ್ನಲ್ಲಿ ಕೆಲಸ ಮಾಡಲು ಬಂದಿದ್ದರು. ಪ್ರೀತಂ ಚಿತ್ರದುರ್ಗದಲ್ಲಿ ಏಳನೇ ತರಗತಿ ಓದುತ್ತಿದ್ದು, ಶನಿವಾರ ಯಡಿಯೂರಿಗೆ ಬಂದಿದ್ದ.
ದಂಪತಿ ಲೇಔಟ್ನಲ್ಲೇ ಶೆಡ್ನೊಳಗೆ ವಾಸವಿದ್ದರು. ಪ್ರೀತಂ ಮೊಬೈಲ್ ಕೊಡಿಸುವಂತೆ ಪೋಷಕರನ್ನು ಒತ್ತಾಯಿಸುತ್ತಿದ್ದ. ಆದರೆ ತಂದೆ ಮೊಬೈಲ್ ಕೊಡಿಸಲು ನಿರಾಕರಿಸಿದ್ದರು. ಇದರಿಂದ ಮನನೊಂದು ಶೆಡ್ನೊಳಗೆ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.