ಬಿ.ಸಿ.ರೋಡ್ – ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ: ಲಕ್ಷಾಂತರ ವೆಚ್ಚದ ಬೀದಿ ದೀಪಗಳು ಇದ್ದರೂ ರಾತ್ರಿ ವೇಳೆ ಕತ್ತಲು!

ಬಂಟ್ವಾಳ: ಬಿ.ಸಿ.ರೋಡಿನಿಂದ ಅಡ್ಡಹೊಳೆ ವರೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಭಾಗವಾಗಿ ರಸ್ತೆ ಬದಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿದ್ದರೂ, ದೀಪಗಳು ಮಾತ್ರ ಇನ್ನೂ ಸಮರ್ಪಕವಾಗಿ ಬೆಳಗಲು ಆರಂಭವಾಗಿಲ್ಲ.

ಲಕ್ಷಾಂತರ ರೂ. ವೆಚ್ಚದಲ್ಲಿ ದೀಪದ ಕಂಬಗಳು ಹಾಗೂ ವಿದ್ಯುತ್ ವ್ಯವಸ್ಥೆ ಅಳವಡಿಸಲಾಗಿದ್ದರೂ, ಹೆದ್ದಾರಿ ವ್ಯಾಪ್ತಿಯ ಬಹುತೇಕ ಭಾಗ ರಾತ್ರಿ ವೇಳೆ ಕತ್ತಲೆಯಲ್ಲೇ ಉಳಿಯುವಂತಾಗಿದೆ. ಸುಮಾರು ಆರು ತಿಂಗಳ ಹಿಂದೆ ದೀಪಗಳನ್ನು ಪ್ರಾಯೋಗಿಕವಾಗಿ ಬೆಳಗಿಸಲಾಗಿತ್ತು. ಆ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ನಿರೀಕ್ಷೆ ಮೂಡಿತ್ತು. ಆದರೆ ಪ್ರಾಯೋಗಿಕ ಬೆಳಕಿನ ವ್ಯವಸ್ಥೆ ಕೆಲವೇ ದಿನಗಳಲ್ಲಿ ಸ್ಥಗಿತಗೊಂಡಿದ್ದು, ಬಳಿಕ ದೀಪಗಳು ನಿರಂತರವಾಗಿ ಉರಿಯದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.ರಸ್ತೆ ಕಾಮಗಾರಿ ಗುತ್ತಿಗೆ ವಹಿಸಿಕೊಂಡ KNRC ಕಂಪೆನಿ ಪ್ರಾಯೋಗಿಕ ಚಾಲನೆಯ ಸಂದರ್ಭ ಜನರೇಟರ್ ಬಳಸಿ ಹೆದ್ದಾರಿಯಲ್ಲಿ ಬೆಳಕು ನೀಡಲಾಗಿತ್ತು. ಒಂದು ದಿನ ದೀಪಗಳು ಬೆಳಗುತ್ತಿರುವ ದೃಶ್ಯ ಸಾರ್ವಜನಿಕರಿಗೆ ಕಂಡುಬಂದಿತ್ತು. ಇದರಿಂದ ಶೀಘ್ರದಲ್ಲೇ ಶಾಶ್ವತ ವಿದ್ಯುತ್ ಸಂಪರ್ಕದ ಮೂಲಕ ದೀಪಗಳು ಕಾರ್ಯಾರಂಭಿಸಲಿವೆ ಎಂಬ ನಿರೀಕ್ಷೆ ಇತ್ತು. ಆದರೆ ಆ ಬಳಿಕ ತಿಂಗಳುಗಳು ಕಳೆದರೂ ದೀಪಗಳು ನಿರಂತರವಾಗಿ ಉರಿಯುವ ವ್ಯವಸ್ಥೆ ಜಾರಿಗೆ ಬಂದಿಲ್ಲ. ಹೀಗಾಗಿ ದೀಪದ ಕಂಬಗಳು ರಸ್ತೆಯುದ್ದಕ್ಕೂ ನಿಂತಿದ್ದರೂ, ರಾತ್ರಿ ವೇಳೆಯಲ್ಲಿ ಅವುಗಳಿಂದ ಬೆಳಕು ಕಾಣದ ಸ್ಥಿತಿ ಮುಂದುವರಿದಿದೆ.ಅಪಘಾತದ ಅಪಾಯ : ಬಿ.ಸಿ.ರೋಡ್–ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಪ್ರಮುಖ ಸಂಚಾರ ಮಾರ್ಗವಾಗಿದ್ದು, ದಿನದ 24 ಗಂಟೆಯೂ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ವಿಶೇಷವಾಗಿ ರಾತ್ರಿ ವೇಳೆ ಭಾರಿ ವಾಹನಗಳು, ಬಸ್ ಗಳು, ಕಾರುಗಳು ಹಾಗೂ ದ್ವಿಚಕ್ರ ವಾಹನಗಳ ಸಂಚಾರ ಹೆಚ್ಚಿರುತ್ತದೆ. ಕೆಲವು ಕಡೆಗಳಲ್ಲಿ ಹೆದ್ದಾರಿಯ ತಿರುವುಗಳು, ಸೇತುವೆಗಳು, ಜಂಕ್ಷನ್ ಗಳು ಹಾಗೂ ಸರ್ವಿಸ್ ರಸ್ತೆ ಸಂಪರ್ಕಿಸುವ ಪ್ರದೇಶಗಳಲ್ಲಿ ಸಮರ್ಪಕ ಬೆಳಕಿನ ಕೊರತೆ ವಾಹನ ಸವಾರರಿಗೆ ತೊಂದರೆ ಉಂಟುಮಾಡುತ್ತಿದೆ. ಮಳೆ ಅಥವಾ ಮಂಜಿನ ಸಂದರ್ಭದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ. ರಸ್ತೆ ನಿರ್ಮಾಣದ ವೇಳೆ ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡಬೇಕಾಗಿದ್ದು, ದೀಪದ ವ್ಯವಸ್ಥೆ ಅಳವಡಿಸಿದ ಬಳಿಕವೂ ಅದು ಕಾರ್ಯನಿರ್ವಹಿಸದಿರುವುದು ಸಾರ್ವಜನಿಕರ ಪ್ರಶ್ನೆಗೆ ಕಾರಣವಾಗಿದೆ.ಕಾರಣವೇನು? : ದೀಪಗಳ ಕಂಬಗಳನ್ನು ಅಳವಡಿಸಿ ಆರು ತಿಂಗಳು ಕಳೆದಿದ್ದರೂ ವಿದ್ಯುತ್ ಸಂಪರ್ಕ ಕಲ್ಪಿಸಿ ನಿರಂತರವಾಗಿ ಬೆಳಗಿಸದಿರುವುದಕ್ಕೆ ನಿಖರ ಕಾರಣವೇನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ವಿದ್ಯುತ್ ಸಂಪರ್ಕ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿಲ್ಲವೇ? ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆ ಇದೆಯೇ? ನಿರ್ವಹಣೆ ಹಾಗೂ ವಿದ್ಯುತ್ ಬಿಲ್ಗೆ ಸಂಬಂಧಿಸಿದ ಹೊಣೆಗಾರಿಕೆ ಇನ್ನೂ ನಿಗದಿಯಾಗಿಲ್ಲವೇ? ಅಥವಾ ಹೆದ್ದಾರಿ ಕಾಮಗಾರಿಯ ಇತರ ಕಾಮಗಾರಿಗಳು ಪೂರ್ಣಗೊಳ್ಳಬೇಕಿರುವುದರಿಂದ ದೀಪಗಳ ಚಾಲನೆ ವಿಳಂಬವಾಗಿದೆಯೇ ಎಂಬುದು ಸ್ಪಷ್ಟವಾಗಬೇಕಿದೆ. ದೀಪಗಳನ್ನು ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದ್ದರೆ, ಅವುಗಳನ್ನು ಕಾರ್ಯಗತಗೊಳಿಸಲು ಇನ್ನೂ ಏಕೆ ವಿಳಂಬವಾಗುತ್ತಿದೆ ಎಂಬುದನ್ನು ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆ ಸಂಸ್ಥೆ ಸ್ಪಷ್ಟಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.