ದೆಹಲಿ: ಕಾರಿನೊಳಗೆ ಯುವತಿಗೆ ಲೈಂಗಿಕ ಕಿರುಕುಳ; ವಿಡಿಯೋ ರೆಕಾರ್ಡ್ ಮಾಡಿ ತಪ್ಪಿಸಿಕೊಂಡ ಸಂತ್ರಸ್ತೆ!

ನವದೆಹಲಿ: ದೆಹಲಿಯಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿರುವ ಕಾರಿನೊಳಗೆ 24 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಯುವತಿಯ ದೂರಿನ ಪ್ರಕಾರ, ತನಗೆ ಪರಿಚಿತನಾಗಿದ್ದ ಆರೋಪಿ, ತಿನ್ನಲು ಮೋಮೋ ಕೊಡಿಸುವ ನೆಪದಲ್ಲಿ ತನ್ನನ್ನು ಕರೆದುಕೊಂಡು ಹೋಗಿ, ನಂತರ ಸಿಎನ್ಜಿ ತುಂಬಿಸುವುದಾಗಿ ಕಾರನ್ನು ನಿರ್ಜನ ಪ್ರದೇಶಕ್ಕೆ ತಿರುಗಿಸಿದ್ದಾನೆ. ಬಳಿಕ ಯುವತಿಗೆ ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸಿದ್ದಾನೆ. ಅಲ್ಲದೆ ಅನುಚಿತವಾಗಿ ತನ್ನನ್ನು ಸ್ಪರ್ಶಿಸಿದ್ದಾನೆ ಎಂದು ಆರೋಪಿಸಿದ್ದಾಳೆ.
ಯುವತಿ ತನ್ನ ಮೊಬೈಲ್ ಫೋನ್ನಲ್ಲಿ ಘಟನೆಯನ್ನು ರೆಕಾರ್ಡ್ ಮಾಡಿದ್ದು, ಆಕೆ ನೀಡಿದ ದೂರಿನ ಆಧಾರದ ಮೇಲೆ, ಪೂರ್ವ ದೆಹಲಿಯ ಮಂದವಾಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಗೊಂದಲದ ವಿಡಿಯೋದಲ್ಲಿ, ಮಹಿಳೆ ತನ್ನನ್ನು ಬಿಟ್ಟುಬಿಡುವಂತೆ ಆ ವ್ಯಕ್ತಿಯಲ್ಲಿ ಬೇಡಿಕೊಳ್ಳುವುದನ್ನು ಕೇಳಬಹುದು. ಆ ವ್ಯಕ್ತಿ, ವಿಡಿಯೋವನ್ನು ತೋರಿಸುತ್ತಾನೆ. ಅನಗತ್ಯ ಲೈಂಗಿಕ ಹೇಳಿಕೆಗಳನ್ನು ನೀಡುತ್ತಾನೆ ಮತ್ತು ಮಹಿಳೆಯನ್ನು ತೀವ್ರ ಒತ್ತಡಕ್ಕೆ ತಳ್ಳುತ್ತಾನೆ.
ಒಂದು ಹಂತದಲ್ಲಿ, ಹತಾಶೆ ಮತ್ತು ಧೈರ್ಯದ ನಡುವೆ ಯುವತಿ ಕಾರಿನ ಕಿಟಕಿಯಿಂದ ಹೊರಗೆ ಬರುವ ಧೈರ್ಯ ಮಾಡುತ್ತಾಳೆ.
“ನೀನು ನನ್ನನ್ನು ಮುಟ್ಟಿದರೆ, ನಾನು ಕಾರಿನಿಂದ ಬಿದ್ದು ಪ್ರಾಣವನ್ನೇ ಕಳೆದುಕೊಳ್ಳುತ್ತೇನೆ” ಎಂದು ಆ ಮಹಿಳೆ ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿಬರುತ್ತಿದೆ. ಈ ವಿಡಿಯೋ ಅಶ್ಲೀಲ ಪದಗಳು ಮತ್ತು ಲೈಂಗಿಕವಾಗಿ ಪ್ರಚೋದಿಸುವ ಮಾತುಗಳಿಂದ ಕೂಡಿದೆ.
“ನನ್ನ ದೇಹವನ್ನು ಮುಟ್ಟಲು ನಾನು ನಿನ್ನನ್ನು ಬಿಡುವುದಿಲ್ಲ” ಎಂದು ಆ ಮಹಿಳೆ ವಿಡಿಯೋದಾದ್ಯಂತ ಪುನರಾವರ್ತಿಸುತ್ತಾ, ಆ ವ್ಯಕ್ತಿ ತನಗೆ ಸುಳ್ಳು ಹೇಳುತ್ತಿದ್ದಾನೆಂದು ಆರೋಪಿಸುತ್ತಾಳೆ.
“ಕೇವಲ ಎರಡು ನಿಮಿಷ ಸುಮ್ಮನಿರು ಅಷ್ಟೇ” ಎಂದು ಆ ವ್ಯಕ್ತಿ ಮಹಿಳೆಯನ್ನು ಪೀಡಿಸುತ್ತಲೇ ಇರುತ್ತಾನೆ. ವಿಡಿಯೋವನ್ನು ತೋರಿಸುತ್ತಾನೆ ಮತ್ತು ಆಕೆಯ ಖ್ಯಾತಿಯನ್ನು ಹಾಳು ಮಾಡುವುದಾಗಿ ಬೆದರಿಕೆ ಹಾಕುತ್ತಿರುವುದು ವಿಡಿಯೋದಲ್ಲಿದೆ.
ಈ ಸಂಬಂಧ ದೆಹಲಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.