ಟೈರ್ ಸ್ಫೋಟಗೊಂಡು ಹೆದ್ದಾರಿಯಲ್ಲಿ ಪಲ್ಟಿಯಾದ ಕಾರು: ಏರ್‌ಬ್ಯಾಗ್‌ನಿಂದ ಚಾಲಕ ಪಾರು!

ಸಾಲಿಗ್ರಾಮ (ಉಡುಪಿ): ಚಲಿಸುತ್ತಿದ್ದ ಕಾರಿನ ಟೈರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಗಳಿಗೆ ಢಿಕ್ಕಿ ಹೊಡೆದು ರಸ್ತೆಯಲ್ಲೇ ಪಲ್ಟಿಯಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಸಾಲಿಗ್ರಾಮ ಸಮೀಪ ಸೋಮವಾರ (ನ.16) ಸಂಭವಿಸಿದೆ.

ಕುಂದಾಪುರದಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಕಾರು ಸಾಲಿಗ್ರಾಮ ಸಮೀಪಿಸುತ್ತಿದ್ದಂತೆ ಮುಂಭಾಗದ ಚಕ್ರ ಸ್ಫೋಟಗೊಂಡಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರು ಹೆದ್ದಾರಿಯ ವಿಭಾಜಕದ (Median) ಮೇಲೆ ಹಾರಿ, ಅಲ್ಲಿನ ಎರಡು ವಿದ್ಯುತ್ ಕಂಬಗಳಿಗೆ ಬಲವಾಗಿ ಢಿಕ್ಕಿ ಹೊಡೆದು ರಸ್ತೆಗೆ ಪಲ್ಟಿಯಾಗಿದೆ. ಅಪಘಾತ ಸಂಭವಿಸಿದ ವೇಳೆ ಕಾರಿನಲ್ಲಿ ಚಾಲಕ ಒಬ್ವರೇ ಇದ್ದರು. ಅಪಘಾತದ ತೀವ್ರತೆ ಕಾರು ಪಲ್ಟಿಯಾಗಿದ್ದರೂ, ಕಾರಿನಲ್ಲಿ ಏರ್‌ಬ್ಯಾಗ್ (Airbag) ಸಮಯಕ್ಕೆ ಸರಿಯಾಗಿ ತೆರೆದುಕೊಂಡಿದ್ದರಿಂದ ಚಾಲಕ ಯಾವುದೇ ಗಂಭೀರ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಢಿಕ್ಕಿಯ ರಭಸಕ್ಕೆ ಎರಡು ವಿದ್ಯುತ್ ಕಂಬಗಳು ಮುರಿದು ತುಂಡಾಗಿದ್ದು, ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿ ಜಖಂಗೊಂಡಿದೆ. ಈ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಲ್ಪ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ಕೋಟ ಪೊಲೀಸರು, ಹೆದ್ದಾರಿ ಟೋಲ್ ಸಿಬ್ಬಂದಿ ಹಾಗೂ ಮೆಸ್ಕಾಂ (MESCOM) ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ, ಅಪಘಾತಕ್ಕೀಡಾದ ವಾಹನವನ್ನು ತೆರವುಗೊಳಿಸಿದರು. ಅಲ್ಲದೆ, ತುಂಡರಿಸಿದ ವಿದ್ಯುತ್ ಕಂಬಗಳನ್ನು ಸರಿಪಡಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.