ಡೆಹ್ರಾಡೂನ್: ನೀಟ್ ಮರುಪರೀಕ್ಷೆಯ ಭೀತಿ; ‘ಐ ಲವ್ ಯೂ ಪಾಪಾ’ ಎಂದು ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹ*ತ್ಯೆ!

ನೀಟ್ ಮರು ಪರೀಕ್ಷೆಗೂ ಮುನ್ನ “ಐ ಲವ್ ಯೂ ಪಾಪಾ” ಎಂದು ಪತ್ರ ಬರೆದಿಟ್ಟು 24 ವರ್ಷದ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಡೆಹ್ರಾಡೂನ್ ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿನಿಯನ್ನು ರಿಯಾ ಕುಮಾರಿ ಎಂದು ಗುರುತಿಸಲಾಗಿದ್ದು, ಆಕೆ ಜೂನ್ 21ರಂದು ನಿಗದಿಯಾಗಿರುವ ನೀಟ್ ಮರು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಡೆಹ್ರಾಡೂನ್ ನ ಕಾಲೇಜೊಂದರ ವಿದ್ಯಾರ್ಥಿನಿಯಾದ ರಿಯಾ ಕುಮಾರಿ, ನಿವೃತ್ತ ಸೇನಾ ಯೋಧರೊಬ್ಬರ ಪುತ್ರಿ ಎನ್ನಲಾಗಿದೆ.

ಮಂಗಳವಾರ ಬೆಳಗ್ಗೆ ಪಟೇಲ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ರಿಯಾ ಕುಮಾರಿ ತನ್ನ ಕೊಠಡಿಯ ಚಿಲಕವನ್ನು ಒಳಗಿನಿಂದ ಹಾಕಿರುವುದನ್ನು ಗಮನಿಸಿದ ಆಕೆಯ ತಾಯಿ, ಈ ವಿಷಯವನ್ನು ತಮ್ಮಪತಿಗೆ ತಿಳಿಸಿದ್ದಾರೆ. ಬಳಿಕ, ಬಾಗಿಲನ್ನು ಬಲವಂತವಾಗಿ ತೆರೆದಾಗ, ರಿಯಾ ಕುಮಾರಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ವಿಷಯವನ್ನು ಬೆಳಗ್ಗೆ ಸುಮಾರು 11.30 ಗಂಟೆಗೆ ಆಕೆಯ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.
“ಘಟನಾ ಸ್ಥಳದಿಂದ ಡೆತ್ ನೋಟ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ “ಐ ಲವ್ ಯೂ ಪಾಪಾ. ನನ್ನನ್ನು ಕ್ಷಮಿಸಿ. ನಾನಿದನ್ನು ಯಾರದೇ ತಪ್ಪಿನಿಂದ ಮಾಡುತ್ತಿಲ್ಲ; ಬದಲಿಗೆ, ನನ್ನ ಅಸಾಮರ್ಥ್ಯದ ಕಾರಣಕ್ಕೆ ಮಾಡಿಕೊಳ್ಳುತ್ತಿದ್ದೇನೆ” ಎಂದು ರಿಯಾ ಕುಮಾರಿ ಬರೆದಿದ್ದಾಳೆ” ಎಂದು ಸದರ್ ವೃತ್ತಾಧಿಕಾರಿ ಅಂಕಿತ್ ಕಂಡಾರಿ ಹೇಳಿದ್ದಾರೆ.
ಆದರೆ, ರಿಯಾ ಕುಮಾರಿಯ ಮರಣೋತ್ತರ ಪರೀಕ್ಷೆಗೆ ನಿರಾಕರಿಸಿರುವ ಆಕೆಯ ಕುಟುಂಬ, ಆಕೆಯ ಅಂತ್ಯಕ್ರಿಯೆಯನ್ನು ಮಂಗಳವಾರ ನೆರವೇರಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಅಂಕಿತ್ ಕಂಡಾರಿ, “ಆಕೆಯ ಮೇಲೆ ಒತ್ತಡ ಹೇರಲಾಗಿತ್ತು ಹಾಗೂ ಆಕೆ ಖಿನ್ನತೆಗೊಳಗಾಗಿದ್ದಳು ಎಂಬ ಆರೋಪದ ಕುರಿತು ನಾವು ತನಿಖೆ ನಡೆಸಲಿದ್ದೇವೆ” ಎಂದು ತಿಳಿಸಿದ್ದಾರೆ.