ಜೈಪುರ: ಅಭಿಜೀತ್ ದೀಪೈಗೆ ಕಪಾಳಮೋಕ್ಷ ಮಾಡಿದ್ದ ಆರೋಪಿಗಳ ಬಿಡುಗಡೆ; ಬೆಂಬಲಿಗರಿಂದ ಅದ್ಧೂರಿ ಸ್ವಾಗತ

ಜೈಪುರ: ಜೈಪುರದಲ್ಲಿ ನಡೆದ ಪ್ರತಿಭಟನೆಯ ವೇಳೆ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪೈಗೆ ಕಪಾಳ ಮೋಕ್ಷ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಿಡುಗಡೆಗೊಳಿಸಿದ್ದು, ಅವರ ಬೆಂಬಲಿಗರು ಅವರಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ರಾಜಸ್ಥಾನದ ಜೈಪುರದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪೈಗೆ ಇಬ್ಬರು ಕಪಾಳ ಮೋಕ್ಷ ನಡೆಸಿದ ಘಟನೆಯ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.
ಬೋಸ್ಟನ್ ನಿಂದ ಮರಳಿದ್ದ ಅಭಿಜೀತ್ ದೀಪೆ ಮೇಲೆ ನಡೆದ ದಾಳಿಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಈ ಘಟನೆಯ ಸಂಬಂಧ ಬಂಧಿತರಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಿಡುಗಡೆಗೊಳಿಸಿದ ಬಳಿಕ, ಅವರ ಬೆಂಬಲಿಗರು ‘ಇಂಕಿಲಾಬ್ ಝಿಂದಾಬಾದ್, ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳನ್ನು ಕೂಗುತ್ತಾ ಅವರಿಗೆ ಮಾಲಾರ್ಪಣೆ ಮಾಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಈ ನಡುವೆ, ತಮ್ಮ ಮೇಲಿನ ದಾಳಿಯ ಬಳಿಕ ಪ್ರತಿಕ್ರಿಯಿಸಿದ ಅಭಿಜೀತ್ ದೀಪ್ಯ ಇಂತಹ ದಾಳಿಗಳಿಂದ ನನ್ನನ್ನು ಬೆದರಿಸಲು ಸಾಧ್ಯವಿಲ್ಲ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳ ಕುರಿತು ಧ್ವನಿ ಎತ್ತುವುದನ್ನು ನಾನು ಮುಂದುವರಿಸುತ್ತೇನೆ ಎಂದು ಘೋಷಿಸಿದ್ದಾರೆ.