ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜಾ ಹತ್ಯೆ; ಎನ್‌ಕೌಂಟರ್‌ನಲ್ಲಿ ಆರೋಪಿ ಬಂಧನ

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮುದರಂಗಡಿಯಲ್ಲಿ ಆಗಸ್ಟ್ 7ರ ಮಧ್ಯಾಹ್ನ ಕಾಂಗ್ರೆಸ್ ಮುಖಂಡ, ಮುದರಂಗಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಡೇವಿಡ್ ಡಿಸೋಜಾ (55) ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಮುದರಂಗಡಿ ಪೇಟೆಯಲ್ಲಿರುವ ಅವರ ಕಚೇರಿ ಬಳಿ ಮಧ್ಯಾಹ್ನ ಸುಮಾರು 3 ಗಂಟೆಗೆ ಈ ಘಟನೆ ನಡೆದಿದ್ದು, ಬೈಕ್‌ನಲ್ಲಿ ಬಂದ ಅಪರಿಚಿತರು ಅತ್ಯಂತ ಹತ್ತಿರದಿಂದ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದು, ಮೃತದೇಹವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದರು.

ಈ ಭೀಕರ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಪ್ರಮುಖ ಆರೋಪಿ ರಾಜು ಎಂಬಾತನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಎನ್‌ಕೌಂಟರ್ ನಡೆಸಿ ಬಂಧಿಸಿದ್ದಾರೆ. ಕಾಪು ಪಿಎಸ್‌ಐ ತೇಜಸ್ವಿ ಹಾಗೂ ಕಾರ್ಕಳ ಗ್ರಾಮಾಂತರ ಪಿಎಸ್‌ಐ ಪ್ರಸನ್ನ ಅವರ ಜಂಟಿ ತಂಡ ಆರೋಪಿಯನ್ನು ಬಂಧಿಸಿ ಕರೆತರುತ್ತಿದ್ದ ವೇಳೆ, ಬೈಂದೂರು ಸಮೀಪದ ಒತ್ತಿನೆಣೆ ಬಳಿ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಎಚ್ಚೆತ್ತ ಕಾಪು ಪಿಎಸ್‌ಐ ತೇಜಸ್ವಿ ತಮ್ಮ ಸರ್ವೀಸ್ ಪಿಸ್ತೂಲ್‌ನಿಂದ ಆರೋಪಿಯ ಕಾಲಿಗೆ ಗುಂಡು ಹಾರಿ ವಶಕ್ಕೆ ಪಡೆದಿದ್ದಾರೆ. ಆರೋಪಿಯ ದಾಳಿಯಿಂದ ಗಾಯಗೊಂಡಿರುವ ಪಿಎಸ್‌ಐ ತೇಜಸ್ವಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಸ್‌ಪಿ ಹರಿರಾಮ್ ಶಂಕರ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಕೃತ್ಯದಲ್ಲಿದ್ದ ಮತ್ತೊಬ್ಬ ಆರೋಪಿಗಾಗಿ ಪೊಲೀಸರ ಶೋಧ ಮುಂದುವರಿದಿದೆ.