“ಚಿಂತಾಮಣಿ: ಚುಡಾಯಿಸಿದ ಪುಂಡರನ್ನು ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ಚಾಕುವಿನಿಂದ ಹಲ್ಲೆ!

ಚಿಕ್ಕಬಳ್ಳಾಪುರ: ನಡುರಸ್ತೆಯಲ್ಲಿ ನಿಂತ ಪುಂಡರ ಗುಂಪೊಂದು ಹುಡುಗಿಯರನ್ನು ಚುಡಾಯಿಸುತ್ತಿದ್ದು ಇದನ್ನು ಪ್ರಶ್ನಿಸಿದ ವಿದ್ಯಾರ್ಥಿನಿಯ ಮನೆಯ ಮೇಲೆ ಆ ಗುಂಪು ಕಲ್ಲು ತೂರಾಟ ನಡೆಸಿದ್ದಲ್ಲದೇ ಮನೆಗೆ ನುಗ್ಗಿ ವಿದ್ಯಾರ್ಥಿನಿಯ ಕತ್ತು ಕೊಯ್ಯಲು ಯತ್ನಿಸಿದ ಘಟನೆ ಚಿಂತಾಮಣಿಯಲ್ಲಿ ನಡೆದಿದೆ.

ಮೇಘನಾ ತನ್ನ ತಂಗಿಯೊಂದಿಗೆ ಹೋಗುತ್ತಿದ್ದಾಗ ಕೆಲ ಯುವಕರು ಚುಡಾಯಿಸಿದ್ದಾರೆ. ಇದಕ್ಕೆ ಮೇಘನಾ ಆಕ್ಷೇಪ ವ್ಯಕ್ತಪಡಿಸಿ ಚುಡಾಯಿಸಬೇಡಿ ಎಂದು ಹೇಳಿದ್ದಾಳೆ. ಅಲ್ಲದೆ ಒಬ್ಬ ಯುವಕನಿಗೆ ಕಪಾಳಕ್ಕೆ ಹೊಡೆದಿದ್ದಾಳೆ. ಇದರಿಂದ ಕೆರಳಿದ ಯುವಕರ ಗುಂಪು ಬಳಿಕ ಮೇಘನಾ ಮನೆಗೆ ತೆರಳಿ ದಾಂದಲೇ ಮಾಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಮೇಘನಾಳ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ಯಲು ಯತ್ನಿಸಿದ್ದಾರೆ.
ಅದೃಷ್ಟವಶಾತ್ ಗುಂಪು ದಾಂಧಲೆ ನಡೆಸುತ್ತಿದ್ದುದ್ದನ್ನು ಗಮನಿಸಿದ ಸ್ಥಳೀಯರು ವಿದ್ಯಾರ್ಥಿನಿಯ ರಕ್ಷಣೆಗೆ ಮುಂದಾಗಿದ್ದರಿಂದ ಮೇಘನಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಹಲ್ಲೆಯಲ್ಲಿ ಗಾಯಗೊಂಡ ಮೇಘನಾಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ನಡೆಸಿದ ಯುವಕರು ಅದೇ ಊರಿನ ನಿವಾಸಿಗಳಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.