ಬೆಂಗಳೂರು: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಡೆಪಾಳ್ಯ ಪೊಲೀಸರಿಂದ ಸೆರೆ!

ಬೆಂಗಳೂರು: ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆಗೆ ಮುಂದಾದ ಆರೋಪಿಯೊಬ್ಬನ ಕಾಲಿಗೆ ಬಂಡೆಪಾಳ್ಯ ‘ಠಾಣೆಯ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಗುಂಡು ಹಾರಿಸಿ ಬಂಧಿಸಿರುವ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಎಲೆಕ್ಟ್ರಾನಿಕ್ ಸಿಟಿಯ ಸುಭಾಷ್ ನಗರದ ನಿವಾಸಿ, ಝೀಶಾನ್ (34) ಗುಂಡೇಟಿನಿಂದ ಗಾಯಗೊಂಡ ಆರೋಪಿ. ಮಡಿವಾಳದಲ್ಲಿ ನಡೆದ ಸುಹೇಲ್ ಕೊಲೆ ಪ್ರಕರಣದ ಆರೋಪಿ ಆದಿಲ್ ಅಕ್ಕಲ್‌ನೊಂದಿಗೆ ಝೀಶಾನ್ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದ್ದು, ಅಕ್ರಮ ಶಸ್ತ್ರಾಸ್ತ್ರಗಳ ತಯಾರಿಕೆ ಮತ್ತು ಮಾರಾಟದ ಜಾಲದೊಂದಿಗೆ ಆತನಿಗೆ ಸಂಪರ್ಕವಿತ್ತು ಎಂಬುದು ಮೇಲ್ನೋಟದ ತನಿಖೆಯಿಂದ ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಸೋಮಸುಂದರಪಾಳ್ಯದ ಕರೆ ರಸ್ತೆಯಲ್ಲಿ ಝೀಶಾನ್ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಪೊಲೀಸರು ಆತನನ್ನು ಹಿಡಿಯಲು ಮುಂದಾಗಿದ್ದರು. ಈ ವೇಳೆ ಆರೋಪಿ ತನ್ನ ಬಳಿಯಿದ್ದ ಚಾಕುವಿನಿಂದ ಪೊಲೀಸ್ ಪೇದೆ ಕಾಂಬ್ಳೆ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಬಂಡೆಪಾಳ್ಯ ಠಾಣೆಯ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಸಚಿನ್ ಅವರು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಆರೋಪಿ ಪೇದೆ ಮೇಲೆ ಹಲ್ಲೆ ಮುಂದುವರಿಸಿದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಝೀಶಾನ್‌ನ ಬಲಗಾಲಿಗೆ ಗುಂಡು ಹಾರಿಸಲಾಗಿದೆ. ಘಟನೆಯ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ಗಾಯಗೊಂಡ ಆರೋಪಿ ಝೀಶಾನ್‌ನನ್ನು ಹಾಗೂ ಪೊಲೀಸ್ ಪೇದೆ ಕಾಂಬ್ಳೆ ಅವರನ್ನು ಚಿಕಿತ್ಸೆಗಾಗಿ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಬಂಡೆಪಾಳ್ಯ ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ್ ಆರ್.ವಿ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಸೋಕೋ (SOCO) ತಂಡವನ್ನು ಕರೆಸಿ ಸಾಕ್ಷ್ಯಾಧಾರಗಳ ಸಂಗ್ರಹ ಹಾಗೂ ಪರಿಶೀಲನಾ ಕಾರ್ಯ ನಡೆಸಲಾಗುತ್ತಿದೆ.