ಮಂಗಳೂರು ರೈಲ್ವೆ ಪ್ರದೇಶ ನೈಋತ್ಯ ರೈಲ್ವೆಗೆ ವರ್ಗಾವಣೆ: ಕೇರಳಕ್ಕೆ ಯಾವುದೇ ನಷ್ಟವಿಲ್ಲ ಎಂದ ರೈಲ್ವೆ ಮಂಡಳಿ!

ಮಂಗಳೂರು : ಮಂಗಳೂರು ರೈಲ್ವೆ ಪ್ರದೇಶವನ್ನು ನೈಋತ್ಯ ರೈಲ್ವೆಯ (SWR) ಮೈಸೂರು ವಿಭಾಗಕ್ಕೆ ಪೂರ್ಣವಾಗಿ ವರ್ಗಾಯಿಸುವ ರೈಲ್ವೆ ಮಂಡಳಿಯ ನಿರ್ಧಾರದಿಂದಾಗಿ ಕೇರಳಕ್ಕೆ ಯಾವುದೇ ನಷ್ಟವಿಲ್ಲ ಮತ್ತು ಇದರಿಂದ ರೈಲು ಕಾರ್ಯಾಚರಣೆಯ ದಕ್ಷತೆ ಹೆಚ್ಚಲಿದೆ ಎಂದು ರೈಲ್ವೆ ಮಂಡಳಿ ಸ್ಪಷ್ಟಪಡಿಸಿದೆ. ಮಂಗಳೂರು ನಗರವು ಕರ್ನಾಟಕದ ವ್ಯಾಪ್ತಿಗೆ ಬರುವುದರಿಂದ, ಪಾಲಕ್ಕಾಡ್ ವಿಭಾಗವು ಕೇರಳದ ವ್ಯಾಪ್ತಿಯಲ್ಲಿರುವ ತನ್ನ ಎಲ್ಲಾ ನಿಲ್ದಾಣಗಳನ್ನು ಉಳಿಸಿಕೊಳ್ಳಲಿದೆ.

ಇಲ್ಲಿಯವರೆಗೆ ಮಂಗಳೂರು ರೈಲ್ವೆ ಪ್ರದೇಶವು ಮೂರು ವಿಭಿನ್ನ ಆಡಳಿತ ವ್ಯಾಪ್ತಿಗೆ ಒಳಪಟ್ಟಿತ್ತು. ದಕ್ಷಿಣ ರೈಲ್ವೆ (SR), ನೈಋತ್ಯ ರೈಲ್ವೆ (SWR) ಮತ್ತು ಕೊಂಕಣ ರೈಲ್ವೆ ನಿಗಮ (KRCL) — ಈ ಮೂರು ಸಂಸ್ಥೆಗಳ ಗಡಿಗಳು ಮಂಗಳೂರಿನ ಪಡೀಲ್‌ನಲ್ಲಿ ಒಂದಾಗುತ್ತಿದ್ದವು. ಪರಿಣಾಮವಾಗಿ, ಗೋವಾ ಅಥವಾ ಹಾಸನ ಕಡೆಯಿಂದ ಮಂಗಳೂರಿಗೆ ಬರುವ ರೈಲುಗಳು ನಿಲ್ದಾಣ ತಲುಪುವಷ್ಟರಲ್ಲಿ ಮೂರು ಆಡಳಿತ ಗಡಿಗಳನ್ನು ದಾಟಬೇಕಾಗಿತ್ತು. ಇದು ಅನಗತ್ಯ ವಿಳಂಬ ಮತ್ತು ದಟ್ಟಣೆ ನಿರ್ವಹಣೆಯಲ್ಲಿ ತೊಡಕುಗಳನ್ನು ಉಂಟುಮಾಡುತ್ತಿತ್ತು.
ಅಲ್ಲದೆ, ಮಂಗಳೂರು ಪಾಲಕ್ಕಾಡ್ ವಿಭಾಗದ ಕೊನೆಯ ಭಾಗದಲ್ಲಿದ್ದು, ಅದರ ಪ್ರಧಾನ ಕಚೇರಿಯಿಂದ ಸುಮಾರು 350 ಕಿ.ಮೀ. ದೂರದಲ್ಲಿದೆ. ಈಗ ಮಂಗಳೂರು, ಹಾಸನ, ಮೈಸೂರು ಮತ್ತು ಬೆಂಗಳೂರು ಸಂಪರ್ಕದ ಇಡೀ ಮಾರ್ಗವನ್ನು ನೈಋತ್ಯ ರೈಲ್ವೆಯ ಒಂದೇ ಆಡಳಿತ ವ್ಯವಸ್ಥೆಯ ಅಡಿಯಲ್ಲಿ ತರುವುದರಿಂದ ಏಕೀಕೃತ ಯೋಜನೆ, ಸುಲಭ ವೇಳಾಪಟ್ಟಿ, ಸರಕು ಸಾಗಣೆ ಹಾಗೂ ಪ್ರಯಾಣಿಕರ ಸೇವೆ ಹೆಚ್ಚು ಪರಿಣಾಮಕಾರಿಯಾಗಲಿದೆ.
ಈ ಆಡಳಿತಾತ್ಮಕ ಬದಲಾವಣೆಯು ಸಂಪೂರ್ಣವಾಗಿ ಕರ್ನಾಟಕ ರಾಜ್ಯಕ್ಕೆ ಸೀಮಿತವಾಗಿದೆ ಎಂದು ತಿಳಿಸಿರುವ ಮಂಡಳಿ, ಕೇರಳದ ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ಮಲಪ್ಪುರಂ, ಪಾಲಕ್ಕಾಡ್ ಮತ್ತು ತ್ರಿಶೂರ್ ಜಿಲ್ಲೆಗಳು ಪಾಲಕ್ಕಾಡ್ ವಿಭಾಗದಲ್ಲೇ ಮುಂದುವರಿಯಲಿವೆ ಎಂದು ಹೇಳಿದೆ. ರೈಲ್ವೆ ಮೂಲಸೌಕರ್ಯ ಹೂಡಿಕೆಯನ್ನು ಆಯಾ ವಿಭಾಗದ ಗಳಿಕೆಯ ಆಧಾರದ ಮೇಲಲ್ಲದೆ, ಸಂಪೂರ್ಣ ನೆಟ್‌ವರ್ಕ್ ಅಗತ್ಯಕ್ಕೆ ತಕ್ಕಂತೆ ಮಾಡಲಾಗುತ್ತದೆ.
ಕಳೆದ ದಶಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇರಳದ ರೈಲ್ವೆ ಅಭಿವೃದ್ಧಿಗೆ ಹೂಡಿಕೆ ಗಣನೀಯವಾಗಿ ಹೆಚ್ಚಿದೆ. ಯುಪಿಎ ಅವಧಿಯ ಸರಾಸರಿ ವೆಚ್ಚಕ್ಕೆ ಹೋಲಿಸಿದರೆ, 2026-27ರ ಅವಧಿಯಲ್ಲಿ ಕೇರಳದ ರೈಲ್ವೆ ಯೋಜನೆಗಳಿಗೆ 3,795 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಪ್ರಸ್ತುತ ಕೇರಳದಲ್ಲಿ 20,000 ಕೋಟಿ ರೂ.ಗೂ ಅಧಿಕ ಮೌಲ್ಯದ ಯೋಜನೆಗಳು ಜಾರಿಯಲ್ಲಿದ್ದು, ಇದರಲ್ಲಿ 9 ಮಲ್ಟಿಟ್ರಾಕಿಂಗ್/ಹೊಸ ಮಾರ್ಗ ಯೋಜನೆಗಳು, 145 ಫ್ಲೈಓವರ್ ಹಾಗೂ ಅಂಡರ್‌ಪಾಸ್‌ಗಳು ಮತ್ತು 19 ನಿಲ್ದಾಣಗಳ ಪುನರಾಭಿವೃದ್ಧಿ ಕಾರ್ಯಗಳು ಸೇರಿವೆ” ಎಂದು ಮಂಡಳಿ ವಿವರಣೆ ನೀಡಿದೆ.
ಸಾರ್ವಜನಿಕರು ಹಾಗೂ ಪ್ರಯಾಣಿಕರು ಈ ನಿರ್ಧಾರವನ್ನು ಕಾರ್ಯಾಚರಣೆಯ ಸುಧಾರಣೆ ಮತ್ತು ತಾಂತ್ರಿಕ ದೃಷ್ಟಿಕೋನದಿಂದ ನೋಡಬೇಕೆಂದು ರೈಲ್ವೆ ಮಂಡಳಿ ಮನವಿ ಮಾಡಿದೆ