ಬಂಟ್ವಾಳ: ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ ವ್ಯಕ್ತಿ; ಪೋಕ್ಸೋ ಕಾಯ್ದೆಯಡಿ ಆರೋಪಿ ಬಂಧನ!

ಬಂಟ್ವಾಳ: ಬಂಟ್ವಾಳ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಯನ್ನು 47 ವರ್ಷದ ಅಪರಿಚಿತ ವ್ಯಕ್ತಿ ಹಿಂಬಾಲಿಸಿದ ಆರೋಪದ ಮೇಲೆ ಬಂಟ್ವಾಳ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಾಲಕಿಯ ತಾಯಿ ನೀಡಿದ ದೂರಿನ ಪ್ರಕಾರ, ಕಳೆದ ಕೆಲವು ದಿನಗಳಿಂದ ಬಾಲಕಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ಅಪರಿಚಿತ ಮಧ್ಯವಯಸ್ಕ ವ್ಯಕ್ತಿಯೊಬ್ಬ ಆಕೆಯನ್ನು ಹಿಂಬಾಲಿಸುತ್ತಿದ್ದ. ಆಗಸ್ಟ್ 19, 2026 ರ ಸಂಜೆ ಬಾಲಕಿ ಕಲ್ಲಡ್ಕ ಬಸ್ ನಿಲ್ದಾಣಕ್ಕೆ ಬಂದಾಗ, ಅದೇ ಅಪರಿಚಿತ ವ್ಯಕ್ತಿ ಆಕೆಯನ್ನು ಗಮನಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಭಯಗೊಂಡ ಬಾಲಕಿ ತಾಯಿ ಕೆಲಸ ಮಾಡುತ್ತಿದ್ದಲ್ಲಿಗೆ ಹೋಗಿ ತಿಳಿಸಿದ್ದಾಳೆ. ಬಳಿಕ ದೂರುದಾರರು ತನ್ನ ಕಛೇರಿಯ ಮಾಲಿಕರೊಂದಿಗೆ ಬಸ್ ನಿಲ್ದಾಣದ ಬಳಿ ಬಂದಾಗ ಅಪರಿಚಿತ ವ್ಯಕ್ತಿ ಅಲ್ಲಿದ್ದ ಎನ್ನಲಾಗಿದೆ. ಆತನನ್ನು ವಿಚಾರಿಸಿದಾಗ ತನ್ನ ಹೆಸರು ಜಯಂತ್ ಎಂಬುದಾಗಿ ತಿಳಿಸಿ ತೆರಳಿದ್ದಾನೆ.
ದೂರಿನ ಆಧಾರದ ಮೇಲೆ, ಬಂಟ್ವಾಳ ಪಟ್ಟಣ ಪೊಲೀಸರು ಅಪರಾಧ ಸಂಖ್ಯೆ 116/2026 ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್), 2023 ರ ಸೆಕ್ಷನ್ 78 ಮತ್ತು 2012 ರ ಪೋಕ್ಸೋ ಕಾಯ್ದೆಯ ಸೆಕ್ಷನ್ 12 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.
ಬಂಟ್ವಾಳದ ಸರಪಾಡಿ ನಿವಾಸಿ ಜಯಂತ್ ಎಂದು ಗುರುತಿಸಲಾದ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು, ವಿಚಾರಣೆ ನಡೆಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
