ಕೆಂಟುಕಿ ವಿಮಾನ ನಿಲ್ದಾಣದಲ್ಲಿ ಅವಘಡ: ಲ್ಯಾಂಡಿಂಗ್ ವೇಳೆ ರನ್‌ವೇಗೆ ಬಾಲದ ಭಾಗ ತಗುಲಿದ ಕಾಲಿಟ್ಟಾ ಏರ್ ವಿಮಾನ

ಬ್ರಸೆಲ್ಸ್‌ನಿಂದ ಆಗಮಿಸಿದ ಕಾಲಿಟ್ಟಾ ಏರ್ (Kalitta Air) ಸರಕು ಸಾಗಣೆ ವಿಮಾನವು ಸಿನ್ಸಿನಾಟಿ ನಾರ್ದರ್ನ್ ಕೆಂಟುಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ರನ್‌ವೇಗೆ ಬಾಲದ ಭಾಗ ತಗುಲಿ (ಟೈಲ್ ಸ್ಟ್ರೈಕ್) ಅನಾಹುತ ಸಂಭವಿಸಿದೆ.

ಬೋಯಿಂಗ್ 777-300 ಮಾದರಿಯ ಕೆ4 264 ವಿಮಾನವು ಟ್ರಾನ್ಸ್‌ಅಟ್ಲಾಂಟಿಕ್ ಹಾರಾಟ ಮುಗಿಸಿ ಲ್ಯಾಂಡಿಂಗ್ ಮಾಡಲು ಯತ್ನಿಸಿದಾಗ ಈ ಘಟನೆ ನಡೆದಿದೆ. ರನ್‌ವೇಗೆ ಬಾಲದ ಭಾಗ ಉಜ್ಜಿಕೊಂಡರೂ, ಸಿಬ್ಬಂದಿಯ ಸಮಯೋಚಿತ ಯೋಚನೆಯಿಂದ ವಿಮಾನವು ಸುರಕ್ಷಿತವಾಗಿ ಕೆಳಗೆ ಇಳಿದಿದೆ.
ಘಟನೆಯಲ್ಲಿ ವಿಮಾನದಲ್ಲಿದ್ದ ಯಾರಿಗೂ ಗಾಯಗಳಾಗಿಲ್ಲ ಎಂದು ವಿಮಾನಯಾನ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹೀತ್ ನಿಕೋಲ್ ದೃಢಪಡಿಸಿದ್ದಾರೆ. ಆದರೆ, ಸುರಕ್ಷತೆಯ ಹಿತದೃಷ್ಟಿಯಿಂದ ಆ ವಿಮಾನವನ್ನು ತಕ್ಷಣವೇ ಹಾರಾಟದಿಂದ ತಡೆಹಿಡಿಯಲಾಗಿದೆ.
ಈ ವಿಮಾನವನ್ನು ಮಿಗಾನ್‌ನಲ್ಲಿರುವ ಕಂಪನಿಯ ಭಾರೀ ನಿರ್ವಹಣಾ ಕೇಂದ್ರವಾದ ಆಸ್ಕೋಡಾ-ವರ್ಟ್ಸ್ಮಿತ್ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಎಂಜಿನಿಯರ್‌ಗಳು ಅಗತ್ಯ ತಪಾಸಣೆ ಮತ್ತು ದುರಸ್ತಿ ಕಾರ್ಯಗಳನ್ನು ನಡೆಸಿದ ಬಳಿಕವಷ್ಟೇ ವಿಮಾನವು ಪುನಃ ಕಾರ್ಯಾಚರಣೆಗೆ ಇಳಿಯಲಿದೆ.