ತೆಹ್ರಿ ಗರ್ವಾಲ್‌ನಲ್ಲಿ ಬಸ್ ಕಂದಕಕ್ಕೆ ಉರುಳಿ 6 ಮಂದಿ ಸಾ*ವು.

ತೆಹಿ ಗರ್ವಾಲ್: ಉತ್ತರಾಖಂಡದ ತೆಹಿ ಗರ್ವಾಲ್ ಜಿಲ್ಲೆಯಲ್ಲಿ ಮಂಗಳವಾರ ಸುಮಾರು 30-35 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಸೇತುವೆಯ ಕೆಳಗೆ ಸುಮಾರು 100 ಮೀಟರ್ ಆಳದ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಕನಿಷ್ಠ ಆರು ಜನರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ.

ಅಪಘಾತದ ಮಾಹಿತಿ ತಿಳಿದ ಕೂಡಲೇ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ, ಕಮರಿಯಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.
ಸುಮಾರು 20 ಗಾಯಾಳುಗಳನ್ನು ಹೊರತೆಗೆದು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್‌ಗಳಲ್ಲಿ ಆಸ್ಪತ್ರೆಗಳಿಗೆ ಸಾಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಿನ ಜಾವ 4:30 ರ ಸುಮಾರಿಗೆ ಗುಲಾರ್ ಬಜಾರ್ ಬಳಿ ಬಸ್ ನಿಯಂತ್ರಣ ತಪ್ಪಿ ಗುಲಾರ್ ಸೇತುವೆಯ ಕೆಳಗಿನ ಕಮರಿಗೆ ಉರುಳಿ ಬಿದ್ದಿದ್ದು, ಅಪಘಾತ ಸಂಭವಿಸಿದೆ. ಬಸ್ ಹರಿದ್ವಾರದಿಂದ ಚಮೋಲಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.ಅಧಿಕಾರಿಗಳ ಪ್ರಕಾರ, ಗುಲಾರ್ ಬಜಾರ್ ಬಳಿ ಬಸ್ ಆಳವಾದ ಕಂದರಕ್ಕೆ ಬಿದ್ದಿದ್ದು, ಪ್ರಮುಖ ರಕ್ಷಣಾ ಕಾರ್ಯಾಚರಣೆ ಆರಂಭವಾಯಿತು. ಬ್ಯಾಸಿ ಮತ್ತು ಧಲ್ಮಾಲಾದಲ್ಲಿರುವ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಠಾಣೆಗಳಿಂದ ತಂಡಗಳನ್ನು ತಕ್ಷಣವೇ ಸ್ಥಳಕ್ಕೆ ನಿಯೋಜಿಸಲಾಗಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ತೆಹಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತಿಕಾ ಖಂಡೇಲ್ವಾಲ್ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ವೇತಾ ಚೌಬೆ ಸೇರಿದಂತೆ ಹಿರಿಯ ಜಿಲ್ಲಾ ಅಧಿಕಾರಿಗಳು ಅಪಘಾತದ ಸ್ಥಳಕ್ಕೆ ತೆರಳಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡಿದರು.
ಈ ಮಧ್ಯೆ, ಉತ್ತರಾಖಂಡದ ತೆಹಿ ಗರ್ವಾಲ್ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.X ನಲ್ಲಿ ಪೋಸ್ಟ್ ಮಾಡಿರುವ ಅವರು, ಈ ಘಟನೆಯಿಂದ ತಾವು ತೀವ್ರ ವಿಚಲಿತರಾಗಿರುವುದಾಗಿ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.ರುದ್ರಪ್ರಯಾಗದಲ್ಲಿ ಬೊಲೆರೋ ಕಮರಿಗೆ ಬಿದ್ದು 4 ಮಂದಿ ಸಾವು
ಏತನ್ಮಧ್ಯೆ, ಸೋಮವಾರ ತಡರಾತ್ರಿ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಬನ್ನಾಡ-ಮೋಹನ್ಸಾಲ್ ಮೋಟಾರ್ ರಸ್ತೆಯಲ್ಲಿ ಬೊಲೆರೊ ವಾಹನವು ಆಳವಾದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ.
ಪೋಖಾರಿಯಿಂದ ರಾನ್ಸಿಗೆ ವಾಹನ ಪ್ರಯಾಣಿಸುತ್ತಿದ್ದಾಗ ಭಟ್ಟಾರಿ-ಕಂದಾರ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಹೊರಳಿ ಕಮರಿಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಸಾವನ್ನಪ್ಪಿದ ನಾಲ್ವರನ್ನು ಕುವಾರ್ ಸಿಂಗ್ (60), ಮದನ್ ಸಿಂಗ್ (40), ಸೂರಜ್ ಸಿಂಗ್ (42) ಮತ್ತು ಬರ್ ಸಿಂಗ್ (70) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಉಮ್ಮದ್ ಸಿಂಗ್ (52), ರಾಜೇಂದ್ರ ಸಿಂಗ್ (56), ಲವಿಶ್ ರಾಣಾ (25), ವಂಶಿಕಾ (8), ಊರ್ಮಿಳಾ ದೇವಿ (33) ಮತ್ತು ಪೂಜಾ ದೇವಿ (34) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ 10:00 ಗಂಟೆ ಸುಮಾರಿಗೆ ಡಯಲ್ 112 ಮೂಲಕ ಅಪಘಾತದ ಬಗ್ಗೆ ವರದಿಯಾಗಿದೆ. ವಾಹನವು ಸುಮಾರು ಒಂಬತ್ತರಿಂದ ಹತ್ತು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗಸ್ಯಮುನಿ ಪೊಲೀಸ್ ಠಾಣೆ, ಎಸ್‌ಡಿಆರ್‌ಎಫ್, ಡಿಡಿಆರ್‌ಎಫ್ ಮತ್ತು 108 ಆಂಬ್ಯುಲೆನ್ಸ್ ಸೇವೆಯ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ರುದ್ರಪ್ರಯಾಗ ವೃತ್ತ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.
ರಾತ್ರಿಯಿಡೀ ನಡೆದ ಕಾರ್ಯಾಚರಣೆಯ ಸಮಯದಲ್ಲಿ, ಕಮರಿಯಲ್ಲಿ ಸಿಲುಕಿದ್ದ ಎಲ್ಲರನ್ನು ಸ್ಥಳಾಂತರಿಸಲಾಯಿತು.