Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಂದೇ ಭಾರತ್ ರೈಲಿನಲ್ಲಿ ಸಿಲುಕಿದ 12 ಮಂದಿ: ಟಿಕೆಟ್ ಇಲ್ಲದೆ ಪ್ರಯಾಣಕ್ಕೆ ₹36 ಸಾವಿರ ದಂಡ!

Spread the love

ಕಾನ್ಪುರ : ಸಾಮಾನ್ಯವಾಗಿ ರೈಲ್ವೆ ನಿಲ್ದಾಣಕ್ಕೆ ಸಂಬಂಧಿಕರು ಅಥವಾ ಸ್ನೇಹಿತರನ್ನು ಬೀಳ್ಕೊಡಲು ಹೋದಾಗ, ಅವರನ್ನು ರೈಲಿನ ಒಳಗೆ ಕೂರಿಸಿ ಬರುವುದು ವಾಡಿಕೆ. ಆದರೆ, ಅತ್ಯಾಧುನಿಕ ಸೌಲಭ್ಯವುಳ್ಳ ‘ವಂದೇ ಭಾರತ್ ಎಕ್ಸ್‌ಪ್ರೆಸ್’ (Vande Bharat Express) ರೈಲಿನಲ್ಲಿ ಹೀಗೆ ಮಾಡಲು ಹೋಗಿ 12 ಮಂದಿ ಸಂಕಷ್ಟಕ್ಕೆ ಸಿಲುಕಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಂಬಂಧಿಕರನ್ನು ಹತ್ತಿಸಲು ರೈಲು ಏರಿದ್ದ 12 ಜನರು, ಸ್ವಯಂಚಾಲಿತ ಬಾಗಿಲುಗಳು ಲಾಕ್ ಆದ ಕಾರಣ ಹೊರಬರಲಾಗದೆ ರೈಲಿನೊಳಗೆ ಸಿಲುಕಿಕೊಂಡಿದ್ದಾರೆ. ಪರಿಣಾಮವಾಗಿ ಟಿಕೆಟ್ ರಹಿತ ಪ್ರಯಾಣದ ಆರೋಪದಡಿ ರೈಲ್ವೆ ಇಲಾಖೆಯು ಈ ತಂಡಕ್ಕೆ ಬರೋಬ್ಬರಿ ₹36,000 ದಂಡ ವಿಧಿಸಿದೆ.ವಾರಣಾಸಿಯಿಂದ ನವದೆಹಲಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾನ್ಪುರ ಸೆಂಟ್ರಲ್ ನಿಲ್ದಾಣದಲ್ಲಿ ನಿಂತಿತ್ತು. ಈ ವೇಳೆ ತಮ್ಮ ಸಂಬಂಧಿಕರಿಗೆ ಲಗೇಜ್ ಇರಿಸಲು ಹಾಗೂ ಸೀಟಿನಲ್ಲಿ ಕೂರಿಸಲು 12 ಮಂದಿ ರೈಲಿನೊಳಗೆ ಪ್ರವೇಶಿಸಿದ್ದರು. ಆದರೆ, ಅವರು ಕೆಳಗಿಳಿಯುವ ಮೊದಲೇ ನಿಗದಿತ ಸಮಯವಾದ್ದರಿಂದ ರೈಲಿನ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿಕೊಂಡು (Auto-lock) ರೈಲು ಹೊರಟೇಬಿಟ್ಟಿತು.
ವಂದೇ ಭಾರತ್ ರೈಲು ವಾರಣಾಸಿ ಬಳಿಕ ಪ್ರಯಾಗ್‌ರಾಜ್ ಮತ್ತು ಕಾನ್ಪುರದಲ್ಲಿ ಮಾತ್ರ ನಿಲುಗಡೆ ಹೊಂದಿದ್ದು, ಅಲ್ಲಿಂದ ನೇರವಾಗಿ ನವದೆಹಲಿಗೆ ತೆರಳುತ್ತದೆ. ನಡುವೆ ಎಲ್ಲಿಯೂ ನಿಲುಗಡೆ ಇಲ್ಲದ ಕಾರಣ, ರೈಲಿನೊಳಗೆ ಸಿಲುಕಿಕೊಂಡಿದ್ದ 12 ಮಂದಿ ತೀವ್ರ ಆತಂಕಕ್ಕೊಳಗಾದರು. ತಕ್ಷಣವೇ ರೈಲು ನಿಲ್ಲಿಸಿ ತಮ್ಮನ್ನು ಕೆಳಗಿಳಿಸುವಂತೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ ಗದ್ದಲ ಸೃಷ್ಟಿಸಿದರು.

ರೈಲ್ವೆ ಸಿಬ್ಬಂದಿ ತಕ್ಷಣವೇ ನಿಯಂತ್ರಣ ಕೊಠಡಿಗೆ (Control Room) ಮಾಹಿತಿ ರವಾನಿಸಿದರು. ಮೇಲಧಿಕಾರಿಗಳ ಸೂಚನೆಯಂತೆ ಬೆಳಿಗ್ಗೆ 10.49ರ ಸುಮಾರಿಗೆ ಇಟಾವಾ ಜಂಕ್ಷನ್‌ನಲ್ಲಿ ರೈಲನ್ನು ನಿಲ್ಲಿಸಲಾಯಿತು. ನಿಲ್ದಾಣದ ಅಧೀಕ್ಷಕ ಪಿ.ಎಂ. ಮೀನಾ, ಆರ್‌ಪಿಎಫ್ (RPF) ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್ ಹಾಗೂ ಜಿಆರ್‌ಪಿ (GRP) ಇನ್ಸ್‌ಪೆಕ್ಟರ್ ಯದುವೀರ್ ಸಿಂಗ್ ನೇತೃತ್ವದ ತಂಡ ರೈಲಿನಲ್ಲಿದ್ದ 12 ಮಂದಿಯನ್ನು ಕೆಳಗಿಳಿಸಿ ಆರ್‌ಪಿಎಫ್ ಠಾಣೆಗೆ ಕರೆದೊಯ್ದಿತು.

ಈ ಕುರಿತು ಮಾಹಿತಿ ನೀಡಿದ ಆರ್‌ಪಿಎಫ್ ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್, ‘‘ಪರಿಶೀಲನೆ ವೇಳೆ ಇವರ ಬಳಿ ಪ್ರಯಾಣದ ಟಿಕೆಟ್ ಇರಲಿ, ಪ್ಲಾಟ್‌ಫಾರ್ಮ್ ಟಿಕೆಟ್ ಕೂಡ ಇರಲಿಲ್ಲ. ರೈಲಿನಲ್ಲಿ ಗದ್ದಲ ಸೃಷ್ಟಿಸಿದ್ದಲ್ಲದೆ ಟಿಕೆಟ್ ರಹಿತವಾಗಿ ಪ್ರಯಾಣಿಸಿದ ಕಾರಣಕ್ಕೆ ಪ್ರತಿ ವ್ಯಕ್ತಿಗೆ ₹3,000 ದಂತೆ ಒಟ್ಟು ₹36,000 ದಂಡ ವಿಧಿಸಿ, ಟಿಕೆಟ್ ನೀಡಲಾಗಿದೆ. ಮುಂದೆ ಇಂತಹ ತಪ್ಪು ಮರುಕಳಿಸದಂತೆ ಎಚ್ಚರಿಕೆ ನೀಡಿ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ’’ ಎಂದು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *