ಗೋಹತ್ಯೆ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು: ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಗುಜರಾತ್ ನ್ಯಾಯಾಲಯ!

ಗಾಂಧೀನಗರ: ಗೋಹತ್ಯೆ (Cow Slaughter) ಪ್ರಕರಣದಲ್ಲಿ ಮೂವರು ವ್ಯಕ್ತಿಗಳಿಗೆ ಗಾಂಧೀನಗರ ಜಿಲ್ಲೆಯ ಕಲೋಲ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಈ ತೀರ್ಪಿನಲ್ಲಿ ಮನುಸ್ಮೃತಿ ಹಾಗೂ ಇತರ ಮಹಾಕಾವ್ಯಗಳನ್ನು ಉಲ್ಲೇಖಿಸಿರುವ ನ್ಯಾಯಾಲಯ, ಇಂತಹ ಕೃತ್ಯಗಳಿಗೆ ಕಾರಣರಾದವರನ್ನು ಕಾನೂನುಬದ್ಧವಾಗಿ ಶಿಕ್ಷಿಸದಿದ್ದರೆ ಗೋವುಗಳ ಸಂತತಿಯೇ ಅಳಿದುಹೋಗಬಹುದು ಎಂದು ಅಭಿಪ್ರಾಯಪಟ್ಟಿದೆ.
ಗುಜರಾತ್ ಸರ್ಕಾರವು 2011ರಲ್ಲಿ, ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ‘ಗುಜರಾತ್ ಪ್ರಾಣಿ ಸಂರಕ್ಷಣಾ ಕಾಯಿದೆ, 1954’ಕ್ಕೆ ತಿದ್ದುಪಡಿ ತಂದಿತು. ಇದರ ಅಡಿಯಲ್ಲಿ ಗೋಹತ್ಯೆಯ ಮೇಲೆ ಸಂಪೂರ್ಣ ನಿಷೇಧ ಹೇರಲಾಯಿತು. ಗೋಮಾಂಸದ ಮಾರಾಟ, ಖರೀದಿ ಮತ್ತು ಸಾಗಾಟವನ್ನು ನಿಷೇಧಿಸಲಾಯಿತು.2017ರಲ್ಲಿ ಈ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಲಾಯಿತು. ಆ ಮೂಲಕ ಗೋಹತ್ಯೆಗೆ ಜೀವಾವಧಿ ಶಿಕ್ಷೆ ವಿಧಿಸುವ ಭಾರತದ ಮೊದಲ ರಾಜ್ಯವಾಗಿ ಗುಜರಾತ್ ಹೊರಹೊಮ್ಮಿತು. ತಿದ್ದುಪಡಿಗೊಂಡ ಈ ಕಾನೂನಿನ ಪ್ರಕಾರ, ಗೋಮಾಂಸವನ್ನು ಹೊಂದಿರುವುದು, ಮಾರಾಟ ಮಾಡುವುದು, ಸಂಗ್ರಹಿಸಿಡುವುದು ಅಥವಾ ಸಾಗಾಟ ಮಾಡುವುದಕ್ಕೆ ಏಳರಿಂದ ಹತ್ತು ವರ್ಷಗಳ ಜೈಲು ಶಿಕ್ಷೆ ಹಾಗೂ 1 ಲಕ್ಷದಿಂದ 5 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ. ಇಂತಹ ಅಪರಾಧಗಳಿಗೆ ಜಾಮೀನು ಸಿಗುವುದಿಲ್ಲ.