ಕೇರಳದ ವಯನಾಡಿನಲ್ಲಿ ಬೆಟ್ಟದಿಂದ ಉರುಳಿ ಬಿದ್ದು ಆನೆಮರಿ ಸಾ*ವು!

ವಯನಾಡು: ಬೆಟ್ಟದಿಂದ ಉರುಳಿ ಬಿದ್ದು ಆನೆ ಮರಿ ಸಾವನ್ನಪ್ಪಿದ್ದು, ತಾಯಿ ಆನೆ ಗೋಳಾಡಿರುವ ಹೃದಯ ವಿದ್ರಾವಕ ಘಟನೆ ಕೇರಳದ (Kerala) ವಯನಾಡಿನಲ್ಲಿ (Wayanad) ನಡೆದಿದೆ.

ಕೇರಳದ ವಯನಾಡು ಜಿಲ್ಲೆಯ ಮಾನಂತವಾಡಿ ಸಮೀಪದ ಕಾಟ್ಟಿಕುಳಂನ (Kattikkulam) ಮುತ್ತುಮಾರಿಯಲ್ಲಿ ಭಾನುವಾರ ಅರಣ್ಯದಂಚಿನ ತೋಟವೊಂದರಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸಮೀಪದ ತೋಟದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿಗಳು ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.ಆನೆಮರಿಯನ್ನು ತಲುಪಲು ಆನೆಗಳ ಪರದಾಟ:
ಸಿಸಿಟಿವಿ ದೃಶ್ಯಗಳಲ್ಲಿ ಆನೆಮರಿ ಬೆಟ್ಟದ ಇಳಿಜಾರಿನಲ್ಲಿ ಉರುಳಿಬೀಳುತ್ತಿರುವುದು ಕಂಡುಬಂದಿದೆ. ಈ ವೇಳೆ ಆನೆಮರಿ ನೋವಿನಿಂದ ಕೂಗುತ್ತಿರುವಾಗ ಅದನ್ನು ರಕ್ಷಿಸಲು ತಾಯಿ ಆನೆ ಧಾವಿಸಿ ಬಂದಿತ್ತಾದರೂ, ಅದರ ಪ್ರಯತ್ನಗಳು ಫಲ ನೀಡಲಿಲ್ಲ. ಆನೆಗಳ ಜೋರಾದ ಘೀಳಿಡುವ ಶಬ್ದವೂ ದೃಶ್ಯಾವಳಿಯಲ್ಲಿ ಕೇಳಿಬಂದಿದೆ.ಘಟನೆ ಕುರಿತು ಮಾಹಿತಿ ಪಡೆದ ಉತ್ತರ ವಯನಾಡು ಅರಣ್ಯ ವಿಭಾಗದ ಕ್ಷಿಪ್ರ ಕಾರ್ಯಾಚರಣೆ ತಂಡ ಭಾನುವಾರ ಸ್ಥಳಕ್ಕೆ ಧಾವಿಸಿತ್ತು. ಆದರೆ ಆನೆಗಳ ಹಿಂಡು ಆನೆಮರಿಯ ಸುತ್ತಲೂ ಸೇರಿದ್ದರಿಂದ ಅರಣ್ಯ ಸಿಬ್ಬಂದಿಗೆ ಅದರ ಬಳಿ ತೆರಳಲು ಸಾಧ್ಯವಾಗಲಿಲ್ಲ. ಸೋಮವಾರ ಬೆಳಗ್ಗೆ ಬೇಗೂರು ಅರಣ್ಯ ವಲಯದ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ತಂಡದ ಜಂಟಿ ತಂಡ ಸ್ಥಳಕ್ಕೆ ಮರಳಿತು. ಬಳಿಕ ಆನೆಗಳ ಹಿಂಡನ್ನು ಕಾಡಿನತ್ತ ಹಿಮ್ಮೆಟ್ಟಿಸುವಲ್ಲಿ ಸಿಬ್ಬಂದಿ ಯಶಸ್ವಿಯಾದರು. ನಂತರ ಆನೆಮರಿಯನ್ನು ಪರಿಶೀಲಿಸಿದಾಗ ಅದು ಮೃತಪಟ್ಟಿರುವುದು ತಿಳಿದುಬಂದಿದೆ.ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಆನೆಮರಿಯ ಮೃತದೇಹವನ್ನು ಕಾಡಿನ ಒಳಭಾಗಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.