ಪರಿಷತ್ ಚುನಾವಣಾ ಫಲಿತಾಂಶದತ್ತ ಎಲ್ಲರ ಚಿತ್ತ: ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಯಾರಿಗೆ?

ಬೆಂಗಳೂರು: ಕರ್ನಾಟಕ ವಿಧಾನಪರಿಷತ್‌ನ(Karnataka Vidhan Parishad) 2 ಪದವೀಧರ ಹಾಗೂ 2 ಶಿಕ್ಷಕರ ಕ್ಷೇತ್ರಗಳಿಗೆ ಅಕ್ಟೋಬರ್ 23ರಂದು ನಡೆದಿದ್ದ ಮಹತ್ವದ ಚುನಾವಣೆಯ(Election) ಮತ ಎಣಿಕೆ ಕಾರ್ಯ ಇಂದುಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ.

ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ, ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಕಾರ್ಯ ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಸಭಾಂಗಣದಲ್ಲಿ ನಡೆಯುತ್ತಿದೆ. ಆಗ್ನೇಯ ಪದವೀಧರ ಕ್ಷೇತ್ರ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಕಾರ್ಯವು ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯುತ್ತಿದೆ.
ನಾಲ್ಕೂ ಮತ ಎಣಿಕೆ(Vote Counting) ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಪ್ರಾಶಸ್ತ್ಯದ ಮತಗಳ (Preference votes) ಎಣಿಕೆಯಾದ ಕಾರಣ ಸ್ಪಷ್ಟ ಚಿತ್ರಣ ಮಧ್ಯಾಹ್ನದ ವೇಳೆಗೆ ಹೊರಬೀಳುವ ಸಾಧ್ಯತೆಯಿದೆ. ಆಡಳಿತಾರೂಢ ಕಾಂಗ್ರೆಸ್(Congress) ಹಾಗೂ ಬಿಜೆಪಿ-ಜೆಡಿಎಸ್ (NDA) ಮೈತ್ರಿಕೂಟದ ಪಾಲಿಗೆ ಈ ಚುನಾವಣೆ ಅತ್ಯಂತ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ವಿಧಾನಸಭಾ ಚುನಾವಣೆಯ ಯಶಸ್ಸಿನ ಬಳಿಕ ಪರಿಷತ್‌ನಲ್ಲೂ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ. ಈ ನಾಲ್ಕೂ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನ ಗೆದ್ದರೆ ಸರ್ಕಾರದ ಆಡಳಿತ ಹಾಗೂ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕತ್ವಕ್ಕೆ ಮತ್ತಷ್ಟು ರಾಜಕೀಯ ಬಲ ಸಿಗಲಿದೆ.