ಓಣಂ ಹಬ್ಬ ಆಚರಿಸಿ ಮರಳಿದ ಕೇರಳ ಮೂಲದ ಇಬ್ಬರು ಮಲಯಾಳಿ ಮಹಿಳೆಯರ ಭೀಕರ ಕೊಲೆ!

ಕ್ಯಾಲಿಫೋರ್ನಿಯಾ : ಅಮೆರಿಕದ ಕ್ಯಾಲಿಫೋರ್ನಿಯಾದ ಮಿಲ್ಪಿಟಾಸ್ನಲ್ಲಿ ಒಂದೇ ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿ ವಾಸಿಸುತ್ತಿದ್ದ ಕೇರಳ ಮೂಲದ ಇಬ್ಬರು ಮಲಯಾಳಿ ಮಹಿಳೆಯರನ್ನು ಅವರ ಆಪ್ತ ಗೆಳತಿಯೇ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಆಗಸ್ಟ್ 28 ರಂದು ನಡೆದಿದೆ.

ತ್ರಿಶೂರ್ನ ಮನ್ನುತ್ತಿ ಮುಡಿಕ್ಕೋಡ್ನ ಅಂಜನಾ ಹರಿ (35) ಹಾಗೂ ತಿರುವನಂತಪುರಂ ಕೇಶವದಾಸಪುರಂನ ಆನ್ ಮೇರಿ ಮ್ಯಾಥ್ಯೂ (40) ಕೊಲೆಯಾದ ದುರ್ದೈವಿಗಳು. ಕೊಲೆ ಆರೋಪದ ಮೇಲೆ ಅವರೊಟ್ಟಿಗೆ ಆಪ್ತವಾಗಿದ್ದ ಕೊಟ್ಟಾಯಂ ಮೂಲದ ಅನಿಲಾ (32) ಎಂಬಾಕೆಯನ್ನು ಮಿಲ್ಪಿಟಾಸ್ ಪೊಲೀಸರು ಬಂಧಿಸಿದ್ದಾರೆ.
ಅಂಜನಾ, ಆನ್ ಮೇರಿ ಹಾಗೂ ಆರೋಪಿ ಅನಿಲಾ ಮೂವರೂ ಮಿಲ್ ಕ್ರೀಕ್ ಅಪಾರ್ಟ್ಮೆಂಟ್ಗಳಲ್ಲೇ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು. ಘಟನೆಗೆ ಹಿಂದಿನ ದಿನವಷ್ಟೇ ಮೂವರೂ ಒಟ್ಟಿಗೆ ಓಣಂ ಹಬ್ಬವನ್ನು ಆಚರಿಸಿ, ಸಿನಿಮಾ ನೋಡಲು ಥಿಯೇಟರ್ಗೆ ಹೋಗಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಆದರೆ ಕೊಲೆಗೆ ನಿಖರವಾದ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಆಗಸ್ಟ್ 28 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಪಾರ್ಟ್ಮೆಂಟ್ನ ಪಾರ್ಕಿಂಗ್ ಪ್ರದೇಶದಲ್ಲಿ ಮಹಿಳೆಯೊಬ್ಬರಿಗೆ ಕಾರು ಡಿಕ್ಕಿ ಹೊಡೆಸಿದ ಬಗ್ಗೆ ಪೊಲೀಸರಿಗೆ ಕರೆ ಬಂದಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ತೀವ್ರವಾಗಿ ಗಾಯಗೊಂಡಿದ್ದ ಅಂಜನಾ ಹರಿ ಶವವಾಗಿ ಪತ್ತೆಯಾಗಿದ್ದರು. ಪ್ರತ್ಯಕ್ಷದರ್ಶಿಗಳು ನೀಡಿದ ಸುಳಿವು ಆಧರಿಸಿ ನೀಲಿ ಬಣ್ಣದ ಎಸ್ಯುವಿ ಕಾರನ್ನು ಪತ್ತೆಹಚ್ಚಿದ ಪೊಲೀಸರು, ಅದರ ಚಾಲಕಿ ಅನಿಲಾಳನ್ನು ಬಂಧಿಸಿದರು.
ಮತ್ತೊಂದೆಡೆ, ಅಂಜನಾ ಕೊಲೆಯಾದ ಸುದ್ದಿ ತಿಳಿದ ಆಕೆಯ ಪತಿ ಜಾಕೋಬ್ ಅಪಾರ್ಟ್ಮೆಂಟ್ಗೆ ಧಾವಿಸಿದಾಗ, ಮನೆ ಒಳಗೆ ಆನ್ ಮೇರಿ ಮ್ಯಾಥ್ಯೂ ಚಾಕುವಿನಿಂದ ಇರಿಯಲ್ಪಟ್ಟು ರಕ್ತದ ಮಡುವಿನಲ್ಲಿ ಸತ್ತು ಬಿದ್ದಿರುವುದು ಕಂಡುಬಂದಿದೆ. ಆನ್ ಮೇರಿಯನ್ನು ಕೊಲೆ ಮಾಡಿದ ಬಳಿಕ ಅಂಜನಾಳನ್ನು ಹೊರಗೆ ಕರೆದು ಕಾರು ಡಿಕ್ಕಿ ಹೊಡೆಸಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಅಂಜನಾ ಹರಿ (35): ಶಾಲಾ ಶಿಕ್ಷಕಿಯಾಗಿದ್ದ ಅಂಜನಾ 2021ರಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಪತಿ ವಿಜೇಶ್ ಹಾಗೂ 6 ವರ್ಷದ ಮಗಳು ವಾಮಿಕಾ ಜೊತೆ ಅಮೆರಿಕಕ್ಕೆ ತೆರಳಿದ್ದರು.
ಆನ್ ಮೇರಿ ಮ್ಯಾಥ್ಯೂ (40): ಕಂಪ್ಯೂಟರ್ ಶಿಕ್ಷಕಿಯಾಗಿದ್ದ ಆನ್ ಮೇರಿ, ಜೂನ್ನಲ್ಲಷ್ಟೇ ತಂದೆಯ 70ನೇ ಹುಟ್ಟುಹಬ್ಬಕ್ಕಾಗಿ ಕೇರಳಕ್ಕೆ ಬಂದು ಮರಳಿದ್ದರು. ಇವರು 12 ಮತ್ತು 5 ವರ್ಷದ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡು ಇಬ್ಬರ ಮೃತದೇಹಗಳನ್ನು ಕೇರಳಕ್ಕೆ ತರಲು ಕನಿಷ್ಠ ಎರಡು ವಾರಗಳಿಗಿಂತ ಹೆಚ್ಚು ಸಮಯ ತಗಲಬಹುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಿಲ್ಪಿಟಾಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.