ದೆಹಲಿ: ಮನೆಯೊಳಗೆ 21 ವರ್ಷದ ಮಾಡೆಲ್ ಮುಸ್ಕಾನ್ ಚಾಕುವಿನಿಂದ ಇರಿದು ಭೀಕರ ಹ*ತ್ಯೆ!

ನವದೆಹಲಿ: ದೆಹಲಿಯ ತಿಲಕ್ ನಗರದ ನ್ಯೂ ಮಹಾವೀರ್ ನಗರ ಪ್ರದೇಶದಲ್ಲಿ 21 ವರ್ಷದ ಮುಸ್ಕಾನ್ ಎಂಬ ಯುವತಿಯನ್ನು ಆಕೆಯ ಮನೆಯೊಳಗೆ ಚಾಕುವಿನಿಂದ ಇರಿದು ದಾರುಣವಾಗಿ ಹತ್ಯೆ ಮಾಡಲಾದ ಭೀಕರ ಘಟನೆ ಸಂಭವಿಸಿದೆ.

ವಿದ್ಯಾರ್ಥಿನಿಯಾಗಿದ್ದ ಮುಸ್ಕಾನ್ ಅರೆಕಾಲಿಕ ಮಾಡೆಲ್ ಆಗಿಯೂ ಕೆಲಸ ಮಾಡುತ್ತಿದ್ದರು. ಬುಧವಾರ ಆಕೆ ಬಾಡಿಗೆ ಮನೆಯಲ್ಲಿ ಒಬ್ಬಂಟಿಯಾಗಿದ್ದ ವೇಳೆಯಲ್ಲಿ ಮನೆಗೆ ನುಗ್ಗಿದ ಕಿರಾತಕ, ಚಾಕುವಿನಿಂದ ಪದೇ ಪದೇ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಮುಸ್ಕಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ.
ಮುಸ್ಕಾನ್ ಭೇಟಿ ನೀಡುತ್ತಿದ್ದ ಜಿಮ್ನಲ್ಲಿ ತರಬೇತುದಾರನಾಗಿದ್ದ ಇಮ್ರಾನ್ ಎಂಬಾತನೇ ಈ ಕೊಲೆ ಮಾಡಿದ್ದಾನೆ ಎಂದು ಮುಸ್ಕಾನ್ ಅವರ ಸಹೋದರ ಆಕಾಶ್ ಪೊಲೀಸರಿಗೆ ತಿಳಿಸಿದ್ದಾರೆ. ಘಟನೆಯ ನಂತರ ಆರೋಪಿ ಇಮ್ರಾನ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ದೆಹಲಿ ಪೊಲೀಸರು ಹಲವು ವಿಶೇಷ ತಂಡಗಳನ್ನು ರಚಿಸಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.