ಕೊಚ್ಚಿಯ ಫೋರಂ ಮಾಲ್ನಲ್ಲಿ ವಿಶಿಷ್ಟ ಓಣಂ ಆಚರಣೆ: ಜನರನ್ನು ಸ್ವಾಗತಿಸಿ ಹೆಜ್ಜೆ ಹಾಕಿದ ರೋಬೋಟ್ ಮಾವೇಲಿ!

ಕೊಚ್ಚಿ: ಓಣಂ ಹಬ್ಬವನ್ನು ಮತ್ತಷ್ಟು ವರ್ಣರಂಜಿತವಾಗಿಸಲು ವ್ಯಾಪಾರ ಸಂಸ್ಥೆಗಳು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಈ ಬಾರಿ ಕೊಚ್ಚಿಯ ಫೋರಂ ಮಾಲ್ ಆಯೋಜಿಸಿರುವ ವಿಶಿಷ್ಟ ಓಣಂ ಕಾರ್ಯಕ್ರಮ ಎಲ್ಲರ ಗಮನ ಸೆಳೆದಿದೆ. ಸಾಮಾನ್ಯವಾಗಿ ಓಣಂ ಸಂದರ್ಭದಲ್ಲಿ ಮಾವೇಲಿ ವೇಷ ಧರಿಸಿದ ವ್ಯಕ್ತಿಗಳನ್ನು ಕರೆತಂದು ಗ್ರಾಹಕರನ್ನು ಸ್ವಾಗತಿಸುವುದು ವಾಡಿಕೆ. ಆದರೆ ಫೋರಂ ಮಾಲ್ನಲ್ಲಿ ಈ ಬಾರಿ ಮನುಷ್ಯನ ಬದಲಿಗೆ ರೋಬೋಟ್ ಮಾವೇಲಿ ಜನರನ್ನು ಸ್ವಾಗತಿಸುತ್ತಿದೆ.

ಮಾಲ್ಗೆ ಆಗಮಿಸುವವರೊಂದಿಗೆ ಕೈಕುಲುಕಿ, ನಮಸ್ತೆ ಹೇಳುವ ಈ ಮುದ್ದಾದ ರೋಬೋಟ್ ಮಾವೇಲಿ ಮಕ್ಕಳು ಹಾಗೂ ವಯಸ್ಕರ ಗಮನ ಸೆಳೆಯುತ್ತಿದೆ. ಅಷ್ಟೇ ಅಲ್ಲ, ಓಣಂನ ಪ್ರಮುಖ ಆಕರ್ಷಣೆಯಾದ ತಿರುವಾತಿರ ಹಾಗೂ ಅಟ್ಟುಪೋಲಿ ಹಾಡುಗಳಿಗೆ ರೋಬೋಟ್ ಮಾವೇಲಿ ಹೆಜ್ಜೆ ಹಾಕುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೋಬೋಟ್ ಮಾವೇಲಿಯ ನೃತ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಮತ್ತೊಂದು ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಇಬ್ಬರು ವ್ಯಕ್ತಿಗಳು ನೆಲದ ಮೇಲೆ ಮಲಗಿರುವ ರೋಬೋಟ್ ಮಾವೇಲಿಯನ್ನು ಎತ್ತಿಕೊಂಡು ಹೋಗುತ್ತಿರುವುದು ಕಂಡುಬಂದಿದೆ.ತಾಂತ್ರಿಕ ದೋಷದಿಂದ ರೋಬೋಟ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತೇ ಅಥವಾ ಕಾರ್ಯಕ್ರಮ ಮುಗಿದ ಬಳಿಕ ಸಿಬ್ಬಂದಿ ಅದನ್ನು ಸ್ಥಳಾಂತರಿಸುತ್ತಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ವಿಡಿಯೋ ನೋಡಿದವರಿಗೆ ಮಾತ್ರ, ರೋಬೋಟ್ ಮಾವೇಲಿ ‘ಸುಸ್ತಾಗಿ ಮಲಗಿಬಿಟ್ಟ’ ದೃಶ್ಯದಂತಿದೆ! ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ನೆಟ್ಟಿಗರು ತಮಾಷೆಯ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಒಟ್ಟಿನಲ್ಲಿ, ನೃತ್ಯ ಮಾಡಿ ಎಲ್ಲರನ್ನೂ ರಂಜಿಸಿದ ರೋಬೋಟ್ ಮಾವೇಲಿ, ಇದೀಗ ‘ವಿಶ್ರಾಂತಿ’ ಪಡೆದಿರುವ ವಿಡಿಯೋ ಮೂಲಕವೂ ನೆಟ್ಟಿಗರ ಮನ ಗೆದ್ದಿದ್ದಾನೆ.