Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಮೆರಿಕ-ಇರಾನ್ ನಡುವೆ ಯುದ್ಧದ ಕಿಚ್ಚು: ದಕ್ಷಿಣ ಇರಾನ್ ಮೇಲೆ ಅಮೆರಿಕದ ವ್ಯಾಪಕ ವಾಯುದಾಳಿ!

Spread the love

ಟೆಹ್ರಾನ್/ವಾಷಿಂಗ್ಟನ್: ಹಾರ್ಮುಝ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಗೆ ಪ್ರತಿಯಾಗಿ ಅಮೆರಿಕ ಮಿಲಿಟರಿ ದಕ್ಷಿಣ ಇರಾನ್‌ ಹಲವು ಪ್ರದೇಶಗಳ ಮೇಲೆ ವ್ಯಾಪಕ ವಾಯುದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ‘ತಕ್ಕ ಉತ್ತರ’ ನೀಡುವುದಾಗಿ ಇರಾನ್ ಎಚ್ಚರಿಕೆ ನೀಡಿದ್ದು, ಹಾರ್ಮುಝ್ ಜಲಸಂಧಿಯ ನಿರ್ವಹಣೆಯಲ್ಲಿ ಯಾವುದೇ ವಿದೇಶಿ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು Al Jazeera ವರದಿ ಮಾಡಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಪ್ರಕಟಿಸಿದ ಹೇಳಿಕೆಯ ಪ್ರಕಾರ, ಮಂಗಳವಾರ ಆರಂಭವಾದ ಕಾರ್ಯಾಚರಣೆಯಲ್ಲಿ ನಾಲ್ಕು ಗಂಟೆಗಳ ಕಾಲ ನಿಖರ ಮಾರ್ಗದರ್ಶಿತ ಶಸ್ತ್ರಾಸ್ತ್ರಗಳನ್ನು ಬಳಸಿ 80ಕ್ಕೂ ಹೆಚ್ಚು ಗುರಿಗಳ ಮೇಲೆ ದಾಳಿ ನಡೆಸಲಾಗಿದೆ. ಹಾರ್ಮುಝ್ ಜಲಸಂಧಿಯ ಮೂಲಕ ಸಾಗುತ್ತಿದ್ದ ಮೂರು ವಾಣಿಜ್ಯ ಹಡಗುಗಳ ಮೇಲೆ ಇರಾನ್ ನಡೆಸಿದ ದಾಳಿಗೆ ಪ್ರತಿಯಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು CENTCOM ತಿಳಿಸಿದೆ.

ಇರಾನ್‌ನ ದಕ್ಷಿಣ ಕರಾವಳಿ ನಗರ ಸಿರಿಕ್‌ನಲ್ಲಿ ಹಲವು ಸ್ಫೋಟಗಳು ಸಂಭವಿಸಿದ್ದು, ವಾಣಿಜ್ಯ ಹಾಗೂ ಮೀನುಗಾರಿಕಾ ಬಂದರುಗಳು, ಕ್ವೆಶ್‌ ದ್ವೀಪ ಮತ್ತು ಬಂದರ್ ಅಬ್ಬಾಸ್ ಸಮೀಪದ ಪ್ರದೇಶಗಳು ದಾಳಿಗೆ ಗುರಿಯಾಗಿವೆ ಎಂದು ಇರಾನ್‌ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ರಾಯಿಟರ್ಸ್‌ಗೆ ಮಾಹಿತಿ ನೀಡಿದ ಅಮೆರಿಕದ ಅಧಿಕಾರಿಯೊಬ್ಬರ ಪ್ರಕಾರ, ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳು, ಕರಾವಳಿ ಕಣ್ಣಾವಲು ಕೇಂದ್ರಗಳು, ಮೇಲ್ಮಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿ ವ್ಯವಸ್ಥೆಗಳು, ಹಡಗು ವಿರೋಧಿ ಕ್ರೂಸ್ ಕ್ಷಿಪಣಿ ತಾಣಗಳು ಹಾಗೂ ಡೋನ್ ಉಡಾವಣಾ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.

ಸಿರಿಕ್ ವಾಣಿಜ್ಯ ಬಂದರು ಪ್ರದೇಶದಲ್ಲಿ ಸ್ಫೋಟದ ಚೂರುಗಳು ತಗುಲಿ ಹಲವರು ಗಾಯಗೊಂಡಿದ್ದಾರೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮ ತಿಳಿಸಿದೆ.
ಹಾರ್ಮುಝ್ ಜಲಸಂಧಿಯ ಸಮೀಪವಿರುವ ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ ಕ್ವೆಶ್ ದ್ವೀಪದಲ್ಲಿ ಆರು ಸ್ಪೋಟಗಳು ಸಂಭವಿಸಿವೆ. ಸಿರಿಕ್ ಬಂದರು ಸಮೀಪದ ಪ್ರದೇಶಗಳಲ್ಲೂ ಕನಿಷ್ಠ ಏಳು ಸ್ಫೋಟಗಳು ಸಂಭವಿಸಿವೆ ಎಂದು ಸರ್ಕಾರಿ ಟಿವಿ ವರದಿ ಮಾಡಿದೆ.
ಹಾರ್ಮುಝ್ ಜಲಸಂಧಿಯ ಮೇಲಿನ ನಿಯಂತ್ರಣದ ದೃಷ್ಟಿಯಿಂದ ಕ್ವೆಶ್ ದ್ವೀಪ ಮತ್ತು ಸಿರಿಕ್ ಎರಡೂ ಅತ್ಯಂತ ಮಹತ್ವದ ಪ್ರದೇಶಗಳಾಗಿವೆ. ಇತ್ತೀಚೆಗೆ ಮಾಡಿಕೊಂಡಿದ್ದ ತಿಳುವಳಿಕೆ ಒಪ್ಪಂದದ ಬಳಿಕ ಹಾರ್ಮುಝ್ ಜಲಸಂಧಿಯಲ್ಲಿ ಸೀಮಿತ ಮಟ್ಟದ ಘರ್ಷಣೆ ಮುಂದುವರಿದಿದ್ದರೂ, ಈಗ ಉದ್ವಿಗ್ನತೆ ಮತ್ತೆ ತೀವ್ರಗೊಂಡಿದೆ ಎಂದು Al Jazeera ವರದಿ ಉಲ್ಲೇಖಿಸಿದೆ.

ಇಲ್ಲಿಯವರೆಗೆ ಇರಾನ್ ಮಿಲಿಟರಿಯಿಂದ ಯಾವುದೇ ಪ್ರತಿದಾಳಿ ನಡೆದಿರುವ ವರದಿಯಾಗಿಲ್ಲ. ಸರ್ವೋಚ್ಚ ನಾಯಕ ಅಲಿ ಖಾಮಿನೈ ಅವರ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಚಿಯಾನ್, ದಾಳಿಯ ನಂತರ ತುರ್ತಾಗಿ ಟೆಹ್ರಾನ್‌ ಗೆ ಮರಳಿದ್ದಾರೆ.
ಒಪ್ಪಂದ ಉಲ್ಲಂಘನೆ ಆರೋಪ
ದಾಳಿಯ ಬಳಿಕ ಪ್ರತಿಕ್ರಿಯಿಸಿದ ಇರಾನ್ ವಿದೇಶಾಂಗ ಸಚಿವಾಲಯ, ಜೂನ್‌ನಲ್ಲಿ ಅಮೆರಿಕದೊಂದಿಗೆ ಮಾಡಿಕೊಂಡಿದ್ದ ತಿಳುವಳಿಕೆ ಒಪ್ಪಂದವನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಆರೋಪಿಸಿದೆ.
ಫೆಬ್ರುವರಿ ಅಂತ್ಯದಲ್ಲಿ ಆರಂಭವಾಗಿದ್ದ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ಜೂನ್‌ನಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ಹಾರ್ಮುಝ್ ಜಲಸಂಧಿಯನ್ನು ಪುನಃ ತೆರೆಯುವ ಪ್ರತಿಯಾಗಿ ಇರಾನ್ ಮೇಲಿನ ಅಮೆರಿಕದ ನೌಕಾ ದಿಗಂಧನವನ್ನು ತೆರವುಗೊಳಿಸಲು ಒಪ್ಪಿಕೊಳ್ಳಲಾಗಿತ್ತು.

ಜೂನ್‌ ಅಂತ್ಯದಲ್ಲಿ ಅಮೆರಿಕವು ಇರಾನ್ ತೈಲದ ಮೇಲಿನ ನಿರ್ಬಂಧಗಳಿಗೆ 60 ದಿನಗಳ ವಿನಾಯಿತಿ ನೀಡಲು ಒಪ್ಪಿಕೊಂಡಿತ್ತು. ಆದರೆ ಒಪ್ಪಂದಕ್ಕೆ ಸಹಿ ಹಾಕಿದ 20 ದಿನಗಳೊಳಗೆ ಅಮೆರಿಕದ ಖಜಾನೆ ಇಲಾಖೆ ಮಂಗಳವಾರ ಆ ವಿನಾಯಿತಿಯನ್ನು ರದ್ದುಗೊಳಿಸಿದೆ. ಆಗಸ್ಟ್ 21ರವರೆಗೆ ಇರಾನ್‌ಗೆ ಕಚ್ಚಾ ತೈಲ ಹಾಗೂ ಸಂಬಂಧಿತ ಉತ್ಪನ್ನಗಳನ್ನು ಉತ್ಪಾದಿಸಲು, ಮಾರಾಟ ಮಾಡಲು ಮತ್ತು ಸಾಗಿಸಲು ಅವಕಾಶ ನೀಡಿದ್ದ ಸಾಮಾನ್ಯ ಪರವಾನಗಿಯನ್ನು ಇಲಾಖೆ ಹಿಂಪಡೆದಿದೆ.
ಇರಾನ್‌ನ ಮುಖ್ಯ ಸಮಾಲೋಚಕ ಮೊಹಮ್ಮದ್ ಗಾಲಿಬಾಫ್, ತೈಲ ನಿರ್ಬಂಧಗಳನ್ನು ಮರು ಜಾರಿಗೊಳಿಸಿರುವುದು “ಪ್ರಮುಖ ಒಪ್ಪಂದ ಉಲ್ಲಂಘನೆ” ಎಂದು ಆರೋಪಿಸಿದ್ದು, ದಕ್ಷಿಣ ಇರಾನ್ ಮೇಲಿನ ಅಮೆರಿಕದ ವಾಯುದಾಳಿಯೂ ಮತ್ತೊಂದು ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ಹಾರ್ಮುಝ್ನಲ್ಲಿ ಟ್ಯಾಂಕರ್‌ಗಳ ಮೇಲೆ ದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಟ್ಯಾಂಕರ್‌ಗಳ ಮೇಲೆ ನಡೆದ ದಾಳಿಯ ಬಳಿಕವೇ ಅಮೆರಿಕ ಈ ಕ್ರಮ ಕೈಗೊಂಡಿದೆ.
ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ಪ್ರಕಾರ, ‘ಅಪರಿಚಿತ ಉಪಕ’ ಡಿಕ್ಕಿ ಹೊಡೆದ ಪರಿಣಾಮ ಖತರ್‌ನ ದ್ರವೀಕೃತ ನೈಸರ್ಗಿಕ ಅನಿಲ (LNG) ಟ್ಯಾಂಕರ್ ಸೋಮವಾರ ಒಮಾನ್ ಕರಾವಳಿಯಲ್ಲಿ ಬೆಂಕಿಗೆ ಆಹುತಿಯಾಗಿದೆ.
ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ ಕಾರಣ ಟ್ಯಾಂಕರ್ ಗುರಿಯಾಗಿದೆ ಎಂದು ಇರಾನ್ ಟಿವಿ ವರದಿ ಮಾಡಿದ್ದರೂ, ದಾಳಿಯ ಹೊಣೆಯನ್ನು ಟೆಹ್ರಾನ್ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಈ ಕುರಿತು CENTCOM ಹಾಗೂ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸೌದಿ ಅರೇಬಿಯಾ ಧ್ವಜ ಹೊತ್ತಿದ್ದ ಮತ್ತೊಂದು ಕಚ್ಚಾ ತೈಲ ಟ್ಯಾಂಕರ್‌ಗೂ ಹಾನಿಯಾಗಿದೆ ಎಂದು ವರದಿಯಾಗಿದೆ. IRGC ಕ್ಷಿಪಣಿ ಉಡಾವಣೆ ನಡೆಸಿದ ಸಂದರ್ಭದಲ್ಲೇ ಹಾರ್ಮುಝ್ ಜಲಸಂಧಿಯಲ್ಲಿ ಈ ಬೆಳವಣಿಗೆಗಳು ನಡೆದಿವೆ ಎಂದು ರಾಯಿಟರ್ಸ್‌ಗೆ ಮೂಲಗಳು ತಿಳಿಸಿವೆ.
ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ನಡೆದ ದಾಳಿಗಳು “ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ” ಎಂದು ಅಮೆರಿಕದ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದು, ಇದಕ್ಕೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಜೂನ್ ಅಂತ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆದ ಪರಸ್ಪರ ದಾಳಿಗಳ ಬಳಿಕ ಮಾಡಿಕೊಂಡಿದ್ದ ಕದನ ವಿರಾಮದ ಆಧಾರವಾದ ಒಪ್ಪಂದವನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಇರಾನ್ ಆರೋಪಿಸುತ್ತಿದೆ.
ಒಪ್ಪಂದದ ಬಳಿಕ ಹಾರ್ಮುಝ್ ಜಲಸಂಧಿಯಲ್ಲಿ ಸಾಗುವ ಹಡಗುಗಳು ಇರಾನ್ ನಿಯಂತ್ರಣದಲ್ಲಿರುವ ಉತ್ತರ ಮಾರ್ಗವನ್ನು ಬಳಸಬೇಕೆಂದು ಟೆಹ್ರಾನ್ ಒತ್ತಾಯಿಸುತ್ತಿದ್ದು ಅಮೆರಿಕ ತನ್ನ ನೌಕಾಪಡೆಯ ಭದ್ರತೆಯಲ್ಲಿರುವ ದಕ್ಷಿಣ ಮಾರ್ಗವನ್ನು ಬಳಸುವಂತೆ ವಾಣಿಜ್ಯ ಹಡಗುಗಳಿಗೆ ಸೂಚಿಸುತ್ತಿದೆ. ಇದೇ ವಿಚಾರವು ಎರಡೂ ರಾಷ್ಟ್ರಗಳ ನಡುವಿನ ಹೊಸ ಉದ್ವಿಗ್ನತೆಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

‘ಅಗತ್ಯ ಕ್ರಮ ಕೈಗೊಳ್ಳುತ್ತೇವೆ’
ಮಂಗಳವಾರದ ಬೆಳವಣಿಗೆಗಳ ಬಳಿಕ ಇರಾನ್ ವಿದೇಶಾಂಗ ಸಚಿವಾಲಯ, ದೇಶದ ಹಿತಾಸಕ್ತಿ ಮತ್ತು ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಅಗತ್ಯವೆಂದು ಪರಿಗಣಿಸುವ ಯಾವುದೇ ಕ್ರಮವನ್ನು ಕೈಗೊಳ್ಳುವುದಾಗಿ ಹೇಳಿದೆ.
ಇರಾನ್‌ನ ಉಪ ವಿದೇಶಾಂಗ ಸಚಿವ ಕಜೆಮ್ ಘರಿಬಬಾದಿ, ಇರಾನ್ ತೈಲ ಮಾರಾಟದ ಮೇಲಿನ ನಿರ್ಬಂಧ ವಿನಾಯಿತಿಯನ್ನು ಅಮೆರಿಕ ರದ್ದುಗೊಳಿಸಿರುವುದು ಹಾಗೂ ದಕ್ಷಿಣ ಇರಾನ್ ಮೇಲೆ ಮಿಲಿಟರಿ ದಾಳಿ ನಡೆಸಿರುವುದು ಇಸ್ಲಾಮಾಬಾದ್ ತಿಳುವಳಿಕೆ ಒಪ್ಪಂದದ 1, 2 ಮತ್ತು 10ನೇ ವಿಧಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ.
ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಗಳು ಹಾಗೂ ಇರಾನ್ ವಿರುದ್ಧ ಅಮೆರಿಕ ನೀಡುತ್ತಿರುವ ಬೆದರಿಕೆ ಹೇಳಿಕೆಗಳೂ ಈ ಒಪ್ಪಂದವನ್ನು ಪದೇ ಪದೇ ಉಲ್ಲಂಘಿಸುತ್ತಿವೆ ಎಂದು ಅವರು ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *