Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತೀಯ ಕಂಪನಿಗಳಿಗೆ ಬಿಗ್ ರಿಲೀಫ್: 4 ಸಂಸ್ಥೆಗಳ ಮೇಲಿನ ನಿರ್ಬಂಧ ಹಿಂತೆಗೆದುಕೊಂಡ ಅಮೆರಿಕ!

Spread the love

ವಾಷಿಂಗ್ಟನ್: ರಷ್ಯಾದ ಮಿಲಿಟರಿ-ಕೈಗಾರಿಕಾ ವಲಯಕ್ಕೆ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಪೂರೈಸಿದ ಆರೋಪದ ಹಿನ್ನೆಲೆಯಲ್ಲಿ ಭಾರತದ ನಾಲ್ಕು ಕಂಪನಿಗಳ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಅಮೆರಿಕ ಸರ್ಕಾರ ಹಿಂತೆಗೆದುಕೊಂಡಿದೆ.

ಅಮೆರಿಕದ ಹಣಕಾಸು ಇಲಾಖೆ (US Department of the Treasury) ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಈ ನಾಲ್ಕು ಕಂಪನಿಗಳನ್ನು ”ಆಫೀಸ್ ಆಫ್ ಫಾರೆನ್ ಅಸೆಟ್ಸ್ ಕಂಟ್ರೋಲ್ (OFAC)”ನ ಸ್ಪೆಷಲ್ ಡಿಸಿಗ್ನೇಟೆಡ್ ನ್ಯಾಷನಲ್ಸ್ ಅಂಡ್ ಬ್ಲಾಕ್ಡ್ ಪರ್ಸನ್ಸ್ (SDN) ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಹೈದರಾಬಾದ್ ಮೂಲದ ಆರ್.ಆರ್.ಜಿ ಇಂಜಿನಿಯರಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಲೋಕೇಶ್ ಮಷೀನ್ಸ್ ಲಿಮಿಟೆಡ್, ಅಹಮದಾಬಾದ್‌ನ ಗ್ಯಾಲಕ್ಸಿ ಬೇರಿಂಗ್ಸ್ ಲಿಮಿಟೆಡ್ ಹಾಗೂ ನವದೆಹಲಿ ಮೂಲದ ಶೌರ್ಯ ಏರೋನಾಟಿಕ್ಸ್ ಪ್ರೈವೇಟ್ ಲಿಮಿಟೆಡ್ ನಿರ್ಬಂಧಗಳಿಂದ ಮುಕ್ತಗೊಂಡ ಕಂಪನಿಗಳಾಗಿವೆ.\

ಗ್ಯಾಲಕ್ಸಿ ಬೇರಿಂಗ್ಸ್ ಲಿಮಿಟೆಡ್ ಕಂಪನಿಯು ರಷ್ಯಾದ ಸಂಸ್ಥೆಗಳಿಗೆ ರೋಲರ್ ಬೇರಿಂಗ್‌ಗಳು ಹಾಗೂ ರೋಲರ್ ಅಸೆಂಬ್ಲಿಗಳಂತಹ ದ್ವಿಪಯೋಗಿ (Dual-use) ವಸ್ತುಗಳನ್ನು ರಫ್ತು ಮಾಡಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ 2024ರ ಅಕ್ಟೋಬರ್‌ನಲ್ಲಿ ಅಮೆರಿಕ ನಿರ್ಬಂಧ ವಿಧಿಸಿತ್ತು.

ಇನ್ನು ಶೌರ್ಯ ಏರೋನಾಟಿಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ರಷ್ಯಾಕ್ಕೆ ರಾಡಾರ್ ಉಪಕರಣಗಳು, ರೇಡಿಯೋ ನ್ಯಾವಿಗೇಷನ್ ವ್ಯವಸ್ಥೆಗಳು, ರಿಮೋಟ್ ಕಂಟ್ರೋಲ್ ಸಾಧನಗಳು ಹಾಗೂ ಇತರೆ ವಿದ್ಯುತ್ ಉಪಕರಣಗಳನ್ನು ಪೂರೈಸಿದೆ ಎಂಬ ಆರೋಪವನ್ನು ಹೊತ್ತಿತ್ತು.

ಆರ್.ಆರ್.ಜಿ ಇಂಜಿನಿಯರಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಅಮೆರಿಕದ ನಿರ್ಬಂಧ ಪಟ್ಟಿಯಲ್ಲಿರುವ ರಷ್ಯಾದ ಆರ್ಟೆಕ್ಸ್ ಲಿಮಿಟೆಡ್ ಕಂಪನಿಗೆ 100ಕ್ಕೂ ಹೆಚ್ಚು ಮೈಕ್ರೋಎಲೆಕ್ಟ್ರಾನಿಕ್ಸ್ ಸಾಗಣೆಗಳನ್ನು ಕಳುಹಿಸಿದೆ ಎಂದು ಆರೋಪಿಸಲಾಗಿತ್ತು.

ಅದೇ ರೀತಿ ಲೋಕೇಶ್ ಮೆಷಿನ್ಸ್ ಲಿಮಿಟೆಡ್ ಕಂಪನಿಯು ರಷ್ಯಾದ ಹಲವು ಉತ್ಪಾದನಾ ಸಂಸ್ಥೆಗಳಿಗೆ ಯಂತ್ರೋಪಕರಣಗಳನ್ನು ರಫ್ತು ಮಾಡಿದೆ ಎಂಬ ಆರೋಪದ ಮೇಲೆ ಅಮೆರಿಕ ನಿರ್ಬಂಧ ವಿಧಿಸಿತ್ತು.

ಇದೀಗ ಇದ್ದಕ್ಕಿದ್ದಂತೆ ಭಾರತದ 4 ಕಂಪನಿಗಳನ್ನು ನಿರ್ಬಂಧ ಪಟ್ಟಿಯಿಂದ ಅಮೆರಿಕಾ ತೆಗೆದುಹಾಕಿದ್ದು, ಯಾವ ಕಾರಣಕ್ಕೆ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬುದರ ಕುರಿತು ಅಧಿಕೃತ ಮಾಹಿತಿ ನೀಡಿಲ್ಲ.

ಅಕ್ಟೋಬರ್ 2024 ರಲ್ಲಿ ಅಮೆರಿಕ ಸರ್ಕಾರವು ರಷ್ಯಾಕ್ಕೆ ನೆರವು ನೀಡುತ್ತಿರುವ ಜಾಗತಿಕ ಸಂಸ್ಥೆಗಳ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಒಟ್ಟು 19 ಭಾರತೀಯ ಸಂಸ್ಥೆಗಳು ಹಾಗೂ ಇಬ್ಬರು ವ್ಯಕ್ತಿಗಳ ಮೇಲೆ ನಿರ್ಬಂಧ ಹೇರಿತ್ತು. ಇದರಿಂದಾಗಿ ಭಾರತ ಮತ್ತು ಅಮೆರಿಕ ನಡುವೆ ರಾಜತಾಂತ್ರಿಕ ವಲಯದಲ್ಲಿ ತೀವ್ರ ಚರ್ಚೆಗಳು ಆರಂಭವಾಗಿದ್ದವು. ಭಾರತ ಸರ್ಕಾರವು ಈ ತಂತ್ರಜ್ಞಾನಗಳ ರಫ್ತು ನಿಯಂತ್ರಣದ ಬಗ್ಗೆ ಕಠಿಣ ಕಾನೂನು ಚೌಕಟ್ಟನ್ನು ಹೊಂದಿರುವುದಾಗಿ ಸ್ಪಷ್ಟಪಡಿಸಿ, ವಾಷಿಂಗ್ಟನ್ ಜೊತೆಗೆ ಸಕ್ರಿಯವಾಗಿ ಮಾತುಕತೆ ನಡೆಸಿತ್ತು.

ಇದೀಗ ಈ ನಾಲ್ಕು ಕಂಪನಿಗಳನ್ನು ಕಪ್ಪು ಪಟ್ಟಿಯಿಂದ ಹೊರಗಿಟ್ಟಿರುವುದರಿಂದ, ಅಮೆರಿಕ ವ್ಯಾಪ್ತಿಯಲ್ಲಿ ಇವುಗಳ ಮೇಲಿದ್ದ ಆಸ್ತಿ ಮುಟ್ಟುಗೋಲು ಆದೇಶಗಳು ಸಂಪೂರ್ಣ ರದ್ದಾಗಲಿವೆ. ಅಲ್ಲದೆ, ಅಮೆರಿಕದ ಯಾವುದೇ ನಾಗರಿಕರು ಅಥವಾ ಆರ್ಥಿಕ ಸಂಸ್ಥೆಗಳು ಇನ್ನು ಮುಂದೆ ಈ ಕಂಪನಿಗಳೊಂದಿಗೆ ಯಾವುದೇ ಕಾನೂನು ತೊಡಕಿಲ್ಲದೆ ಮುಕ್ತವಾಗಿ ವ್ಯಾಪಾರ ಮತ್ತು ಆರ್ಥಿಕ ವಹಿವಾಟುಗಳನ್ನು ನಡೆಸಬಹುದಾಗಿದೆ. ಆದಾಗ್ಯೂ, ಉಳಿದ ಭಾರತೀಯ ಕಂಪನಿಗಳ ಮೇಲಿನ ನಿರ್ಬಂಧಗಳು ಸದ್ಯಕ್ಕೆ ಮುಂದುವರಿದಿವೆ


Spread the love
Share:

administrator

Leave a Reply

Your email address will not be published. Required fields are marked *