Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನೀರಿನ ಹಕ್ಕು ಕಿತ್ತುಕೊಂಡರೆ ಕೈ ಕತ್ತರಿಸುತ್ತೇವೆ: ಭಾರತದ ವಿರುದ್ಧ ಪಾಕ್ ಸಚಿವ ಮುಸಾದಿಕ್ ಮಲಿಕ್ ಆಕ್ರೋಶ

Spread the love

ಇಸ್ಲಾಮಾಬಾದ್: ಸಿಂಧೂ ಜಲ ಒಪ್ಪಂದದ (IWT) ಕುರಿತು ಭಾರತ ಮತ್ತು ಪಾಕಿಸ್ತಾನದ ನಡುವಿನ ವಿವಾದ ತೀವ್ರಗೊಂಡಿರುವ ನಡುವೆ, ಪಾಕಿಸ್ತಾನದ ಸಚಿವ ಮುಸಾದಿಕ್ ಮಲಿಕ್ ಅವರು ಭಾರತಕ್ಕೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ ಪಾಕಿಸ್ತಾನಕ್ಕೆ ಸೇರಿರುವ ನೀರಿನ ಹಕ್ಕುಗಳನ್ನು ಕಸಿದುಕೊಳ್ಳಲು ಯಾವುದೇ ಪ್ರಯತ್ನ ನಡೆದರೆ ಅದನ್ನು ಬಲವಾಗಿ ಎದುರಿಸುವುದಾಗಿ ಹೇಳಿದ್ದಾರೆ.
ಪಾಕಿಸ್ತಾನದ ಮಾಹಿತಿ ಸಚಿವ ಅಲ್ಲಾ ತರಾರ್ ಅವರೊಂದಿಗೆ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಸಾದಿಕ್ ಮಲಿಕ್, ಭಾರತವು ಪಾಕಿಸ್ತಾನದ ನೀರಿನ ಸರಬರಾಜನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

“ನೆರೆ ದೇಶದ ಪ್ರಧಾನಿಯವರು ಪಾಕಿಸ್ತಾನಕ್ಕೆ ಒಂದು ಹನಿ ನೀರನ್ನೂ ಹರಿಯಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ” ಎಂದು ಮಲಿಕ್ ಹೇಳಿದ್ದಾರೆ ಎಂದು ಪಾಕಿಸ್ತಾನದ ‘ಡಾನ್’ ಪತ್ರಿಕೆ ವರದಿ ಮಾಡಿದೆ.
“ನಮ್ಮ ಪಾಲಿನ ನೀರಿನ ಮೇಲೆ ಹಕ್ಕು ಸಾಧಿಸಲು ಯಾರು ಪ್ರಯತ್ನಿಸುತ್ತಾರೋ, ಅವರ ಕೈಗಳನ್ನು ನಾವು ಕತ್ತರಿಸುತ್ತೇವೆ” ಎಂದು ಅವರು ತೀವ್ರ ಎಚ್ಚರಿಕೆ ನೀಡಿದ್ದಾರೆ.
ಮುಸಾದಿಕ್ ಮಲಿಕ್ ಅವರ ಈ ಹೇಳಿಕೆಗಳನ್ನು ಪಾಕಿಸ್ತಾನದ ಪ್ರಸಾರ ಸಂಸ್ಥೆ 24NewsHD ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿವೆ.
ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ ಪಾಕಿಸ್ತಾನಕ್ಕೆ ಇರುವ ನೀರಿನ ಹಕ್ಕುಗಳನ್ನು ರಕ್ಷಿಸಲು ತಮ್ಮ ದೇಶ ಬದ್ಧವಾಗಿದೆ ಎಂದು ಮಲಿಕ್ ಹೇಳಿದರು. ಪಾಕಿಸ್ತಾನಕ್ಕೆ ಹಂಚಿಕೆಯಾದ ನೀರಿನ ಹರಿವನ್ನು ತಡೆಯಲು ಭಾರತಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದರು.

‘ಸಿಂಧೂ ಜಲ ಒಪ್ಪಂದ ಇನ್ನೂ ಜಾರಿಯಲ್ಲಿದೆ’
ಪಾಕಿಸ್ತಾನದ ಮಾಹಿತಿ ಸಚಿವ ಅಥಾವುಲ್ಲಾ ತರಾರ್ ಮಾತನಾಡಿ, ಸಿಂಧೂ ಜಲ ಒಪ್ಪಂದವು ಕಾನೂನುಬದ್ಧವಾಗಿ ಜಾರಿಯಲ್ಲಿರುವ ಒಪ್ಪಂದವಾಗಿದ್ದು, ಅದನ್ನು ಏಕಪಕ್ಷೀಯವಾಗಿ ಅಮಾನತುಗೊಳಿಸಲು ಅಥವಾ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.
“ಸಿಂಧೂ ಜಲ ಒಪ್ಪಂದ ಇನ್ನೂ ಜಾರಿಯಲ್ಲಿದೆ. ಭಾರತದ ನಿಲುವನ್ನು ಯಾವುದೇ ಅಂತರರಾಷ್ಟ್ರೀಯ ವೇದಿಕೆ ಅಂಗೀಕರಿಸಿಲ್ಲ” ಎಂದು ಅವರು ಹೇಳಿದರು.
ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು “ನೀರು ನಮ್ಮ ಜೀವನಾಡಿ ಮತ್ತು ನಮ್ಮ ಕೆಂಪು ರೇಖೆ” ಎಂದು ಪದೇ ಪದೇ ಹೇಳಿರುವುದನ್ನು ಅವರು ಉಲ್ಲೇಖಿಸಿದರು.

ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ ಪಾಕಿಸ್ತಾನಕ್ಕೆ ಇರುವ ಹಕ್ಕುಗಳು ಅಂತರರಾಷ್ಟ್ರೀಯ ಕಾನೂನಿನಿಂದ ರಕ್ಷಿಸಲ್ಪಟ್ಟಿವೆ ಎಂದು ತರಾ‌ರ್ ಪ್ರತಿಪಾದಿಸಿದರು.
ಇದೇ ವೇಳೆ, ಸಿಂಧೂ ಜಲ ಒಪ್ಪಂದ ಕುರಿತ ಮೊದಲ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಂಗಳವಾರ ಇಸ್ಲಾಮಾಬಾದ್‌ನಲ್ಲಿ ಆಯೋಜಿಸಲಾಗುವುದು ಎಂದು ಅವರು ಘೋಷಿಸಿದರು. ಕಾನೂನು ತಜ್ಞರು, ಜಲ ತಜ್ಞರು ಹಾಗೂ ವಿದೇಶಿ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸಿಂಧೂ ಜಲ ಒಪ್ಪಂದದ ಹಿನ್ನೆಲೆ
1960ರಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಈ ಒಪ್ಪಂದದ ಪ್ರಕಾರ, ರಾವಿ, ಬಿಯಾಸ್ ಮತ್ತು ಸಟ್ಲಜ್ ನದಿಗಳ ನೀರಿನ ಬಳಕೆಯ ಹಕ್ಕು ಭಾರತಕ್ಕೆ ಸೇರಿದ್ದು, ಸಿಂಧೂ, ಝೀಲಂ ಮತ್ತು ಚೆನಾಬ್ ನದಿಗಳ ಬಹುಪಾಲು ನೀರಿನ ಹಕ್ಕು ಪಾಕಿಸ್ತಾನಕ್ಕೆ ಸೇರಿದೆ.

2025ರ ಏಪ್ರಿಲ್‌ನಲ್ಲಿ ಪಹಲ್ಲಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟ ಬಳಿಕ ಭಾರತವು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿತ್ತು. ಈ ದಾಳಿಗೆ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರನ್ನು ಭಾರತ ಹೊಣೆಗಾರರನ್ನಾಗಿ ಮಾಡಿತ್ತು. ಆದರೆ, ಪಾಕಿಸ್ತಾನ ಈ ಆರೋಪವನ್ನು ತಳ್ಳಿಹಾಕಿದೆ.
ಭಾರತದ ನಿರ್ಧಾರವನ್ನು ಪಾಕಿಸ್ತಾನ ಪದೇ ಪದೇ ಪ್ರಶ್ನಿಸುತ್ತಿದ್ದು ಗಡಿಯಾಚೆಗಿನ ನೀರಿನ ಹರಿವಿನಲ್ಲಿ ಯಾವುದೇ ಬದಲಾವಣೆ ತರಲು ಪ್ರಯತ್ನಿಸಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಿದೆ.
ಈ ಹಿಂದೆ ಪಾಕಿಸ್ತಾನದ ರಕ್ಷಣಾ ಸಚಿವ ಖ್ಯಾಝಾ ಆಸಿಫ್ ಕೂಡ, “ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ನೀರಿನ ಭದ್ರತೆಗೆ ಧಕ್ಕೆ ಉಂಟಾಗಿದೆ ಎಂದು ಭಾವಿಸಿದರೆ, ಭಾರತ ವಿರುದ್ಧ ಯುದ್ದಕ್ಕೂ ಸಿದ್ಧರಾಗುತ್ತೇವೆ” ಎಂದು ಹೇಳಿದ್ದರು.


Spread the love
Share:

administrator

Leave a Reply

Your email address will not be published. Required fields are marked *