ಉತ್ತರ ಪ್ರದೇಶ: ಪ್ರತಾಪ್ಗಢದಲ್ಲಿ ಭಾರಿ ಮಳೆಗೆ ಮನೆ ಕುಸಿದು ಒಂದೇ ಕುಟುಂಬದ ಆರು ಮಂದಿ ದಾರುಣ ಸಾವು!

ಪ್ರತಾಪ್ ಗಢ: ಉತ್ತರ ಪ್ರದೇಶದ ಪ್ರತಾಪ್ ಗಢ ಜಿಲ್ಲೆಯಲ್ಲಿ ಭಾರಿ ಮಳೆಗೆ ಮನೆಯೊಂದು ಕುಸಿದು ಬಿದ್ದ ಪರಿಣಾಮ, ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿರುವ ಘಟನೆ ಗುರುವಾರ ಮುಂಜಾನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹುಲಿ ಬಝಾರ್ ನಲ್ಲಿ ಮುಂಜಾನೆ ಸುಮಾರು ಎರಡು ಗಂಟೆಗೆ ಈ ಘಟನೆ ನಡೆದಿದ್ದು, ಈ ವೇಳೆ ಒಂದೇ ಕುಟುಂಬದ ಏಳು ಮಂದಿ ನಿದ್ರಿಸುತ್ತಿದ್ದರು ಎನ್ನಲಾಗಿದೆ.
ಮೃತರನ್ನು ಪ್ರಮೋದ್ ಶ್ರೀವಾಸ್ತವ (60), ಅವರ ಪತ್ನಿ ರೀಟಾ (55), ಪುತ್ರ ನಿತಿನ್ (25), ಸೊಸೆ ಮಾಧುರಿ (24), ಇಬ್ಬರು ಮಕ್ಕಳಾದ ಮಾಧವ್ (2) ಹಾಗೂ 10 ತಿಂಗಳ ಅದ್ವಿಕ್ ಎಂದು ಗುರುತಿಸಲಾಗಿದೆ.
ಈ ಘಟನೆ ವೇಳೆ ಮನೆಯಲ್ಲಿದ್ದ ಅಮನ್ ಎಂಬವರು ಬದುಕುಳಿದಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ಅವಶೇಷಗಳಡಿ ಸಿಲುಕಿಕೊಂಡಿದ್ದವರನ್ನು ಹೊರಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲರನ್ನೂ ಸರಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತಾದರೂ, ಆರು ಮಂದಿ ಮಾರ್ಗಮಧ್ಯವದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಈ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
