Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹಾರ್ಮುಝ್ ಜಲಸಂಧಿಯಲ್ಲಿ ಅಮೆರಿಕದ ಮತ್ತೆ ವೈಮಾನಿಕ ದಾಳಿ: ಕಚ್ಚಾ ತೈಲ ಬೆಲೆಯಲ್ಲಿ ಶೇ. 7ರಷ್ಟು ಏರಿಕೆ!

Spread the love

ವಾಷಿಂಗ್ಟನ್: ಹಾರ್ಮುಝ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಯ ಬೆನ್ನಲ್ಲೇ, ಜಲಮಾರ್ಗದಲ್ಲಿ ನೌಕಾಯಾನಕ್ಕೆ ಬೆದರಿಕೆ ಒಡ್ಡುವ ಇರಾನ್ ನ ಸಾಮರ್ಥ್ಯವನ್ನು ಕುಗ್ಗಿಸುವ ಉದ್ದೇಶದಿಂದ ಅಮೆರಿಕ ಬುಧವಾರ ಹೊಸ ವೈಮಾನಿಕ ದಾಳಿಗಳನ್ನು ನಡೆಸಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ.
ಇರಾನ್ ನೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ಮಾಡಿಕೊಂಡಿದ್ದ ಮಧ್ಯಂತರ ಒಪ್ಪಂದವು “ಮುಗಿದಿದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಕೆಲವೇ ಗಂಟೆಗಳ ಬಳಿಕ ಈ ದಾಳಿಗಳು ನಡೆದಿವೆ. ಹಾರ್ಮುಝ್ ಜಲಸಂಧಿಯಲ್ಲಿ ನೌಕಾಯಾನ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳುವುದು ಹಾಗೂ ಅಂತರರಾಷ್ಟ್ರೀಯ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಈ ಕಾರ್ಯಾಚರಣೆಯ ಉದ್ದೇಶ ಎಂದು ಅಮೆರಿಕ ಹೇಳಿದೆ.

ಇದೇ ವೇಳೆ, ಮಂಗಳವಾರ ಹಾರ್ಮುಝ್ ಜಲಸಂಧಿಯಲ್ಲಿ ಮೂರು ವಾಣಿಜ್ಯ ಸರಕು ಹಡಗುಗಳ ಮೇಲೆ ನಡೆದ ದಾಳಿಯ ನಂತರ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ಕಚ್ಚಾ ತೈಲದ ಬೆಲೆ ಸುಮಾರು ಶೇ.7ರಷ್ಟು ಏರಿಕೆಯಾಗಿದೆ.
ಇದರ ನಡುವೆಯೇ, ಬುಧವಾರ ಬಹ್ರನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಹೊಸ ದಾಳಿಗಳನ್ನು ಆರಂಭಿಸಿದೆ.
“ಕಮಾಂಡರ್-ಇನ್-ಚೀಫ್ ಅವರ ನಿರ್ದೇಶನದಂತೆ, ಹಾರ್ಮುಝ್ ಜಲಸಂಧಿಯಲ್ಲಿ ನೌಕಾಯಾನ ಸ್ವಾತಂತ್ರ್ಯಕ್ಕೆ ಬೆದರಿಕೆ ಒಡ್ಡುವ ಇರಾನ್‌ನ ಸಾಮರ್ಥ್ಯವನ್ನು ಮತ್ತಷ್ಟು ಕುಗ್ಗಿಸಲು ಅಮೆರಿಕದ ಸೆಂಟ್ರಲ್ ಕಮಾಂಡ್ ಪಡೆಗಳು ಹೆಚ್ಚುವರಿ ದಾಳಿಗಳನ್ನು ಆರಂಭಿಸಿವೆ” ಎಂದು ಸೆಂಟ್‌ಕಾಮ್ ಪ್ರಕಟಣೆಯಲ್ಲಿ ತಿಳಿಸಿದೆ.

“ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ವಾಣಿಜ್ಯ ಹಡಗುಗಳು ಮತ್ತು ನಾಗರಿಕ ಸಿಬ್ಬಂದಿ ಮುಕ್ತವಾಗಿ ಸಂಚರಿಸುವ ಹಕ್ಕಿನ ವಿರುದ್ಧ ನಡೆದ ಇತ್ತೀಚಿನ ಅನ್ಯಾಯದ ದಾಳಿಗಳಿಗೆ ಅಮೆರಿಕ ಇರಾನ್‌ನನ್ನೇ ಹೊಣೆಗಾರನನ್ನಾಗಿ ಮಾಡುತ್ತದೆ” ಎಂದೂ ಪ್ರಕಟನೆ ಹೇಳಿದೆ.
ಜಾಗತಿಕ ತೈಲ ಪೂರೈಕೆಯ ಸುಮಾರು ಐದನೇ ಒಂದು ಭಾಗ ಹಾರ್ಮುಝ್ ಜಲಸಂಧಿಯ ಮೂಲಕ ಸಾಗುವುದರಿಂದ, ಈ ಜಲಮಾರ್ಗದ ಮೇಲಿನ ನಿಯಂತ್ರಣ ಟೆಹ್ರಾನ್‌ಗೆ ಮಹತ್ವದ ಕಾರ್ಯತಂತ್ರದ ಬಲ ನೀಡಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ ಮಿಲಿಟರಿಯಾದ ಅಮೆರಿಕದೊಂದಿಗೆ ನಡೆಯುತ್ತಿರುವ ಬಿಕ್ಕಟ್ಟಿನಲ್ಲಿ ಇದೇ ತನ್ನ ಪ್ರಮುಖ ಒತ್ತಡದ ಅಸ್ತವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಹಡಗುಗಳ ಮೇಲಿನ ದಾಳಿಯ ಹೊಣೆಯನ್ನು ಇರಾನ್ ಅಧಿಕೃತವಾಗಿ ಹೊತ್ತುಕೊಂಡಿಲ್ಲ. ಆದರೂ ಅಮೆರಿಕದೊಂದಿಗೆ ದೀರ್ಘಾವಧಿಯ ಶಾಂತಿ ಒಪ್ಪಂದದ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲೇ ತನ್ನ ಕಾರ್ಯತಂತ್ರದ ಮೇಲುಗೈ ಪ್ರದರ್ಶಿಸಲು ಟೆಹ್ರಾನ್ ಇಂತಹ ಕ್ರಮಗಳನ್ನು ಅನುಸರಿಸುತ್ತಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಇತ್ತೀಚಿನ ದಾಳಿಗಳಿಂದ ಈಗಾಗಲೇ ಅಸ್ಥಿರವಾಗಿದ್ದ ಕದನ ವಿರಾಮ ಮತ್ತಷ್ಟು ಹದಗೆಟ್ಟಿದೆ. ಫೆಬ್ರುವರಿ 28ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯೊಂದಿಗೆ ಆರಂಭವಾದ ಸಂಘರ್ಷವನ್ನು ಕೊನೆಗೊಳಿಸುವ ಉದ್ದೇಶದಿಂದ ಜೂನ್ 17ರಂದು ಸಹಿ ಮಾಡಲಾಗಿದ್ದ ತಿಳುವಳಿಕೆ ಪತ್ರವು ಶಾಶ್ವತ ಶಾಂತಿ ಒಪ್ಪಂದವಾಗಿ ರೂಪುಗೊಳ್ಳುವ ಸಾಧ್ಯತೆಯೂ ಇದರಿಂದ ಕ್ಷೀಣಿಸಿದೆ.

“ಇರಾನ್‌ನೊಂದಿಗೆ ಶಾಶ್ವತ ಒಪ್ಪಂದ ಸಾಧ್ಯವಾಗುತ್ತದೆಯೇ ಎಂಬ ಬಗ್ಗೆ ನನಗೆ ಖಚಿತತೆ ಇಲ್ಲ. ಅವರು ಅತ್ಯಂತ ಅವಮಾನಕರವಾಗಿ ವರ್ತಿಸುತ್ತಾರೆ ಎಂಬುದು ನನ್ನ ಅನುಭವ” ಎಂದು ಟ್ರಂಪ್ ಬುಧವಾರ ಟರ್ಕಿಯ ಅಂಕಾರಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಆದರೂ, ಪೂರ್ಣ ಪ್ರಮಾಣದ ಯುದ್ಧ ಮತ್ತೆ ಆರಂಭವಾಗುತ್ತದೆ ಎಂದು ತಾವು ನಿರೀಕ್ಷಿಸುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಆದರೆ ಶಾಶ್ವತ ಶಾಂತಿ ಒಪ್ಪಂದದ ಕುರಿತು ಮಾತುಕತೆಗಳು ಮುಂದುವರಿಯಲಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.


Spread the love
Share:

administrator

Leave a Reply

Your email address will not be published. Required fields are marked *