ಉಡುಪಿ: ಸಂತೆಕಟ್ಟೆ ಸರ್ವಿಸ್ ರಸ್ತೆಯಲ್ಲಿ ಉರುಳಿದ ಬೃಹತ್ ಮರ; ಕೆಲಕಾಲ ಅಸ್ತವ್ಯಸ್ತಗೊಂಡ ವಾಹನ ಸಂಚಾರ!

ಉಡುಪಿ: ಉಡುಪಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ಸಂತೆಕಟ್ಟೆ ಸರ್ವಿಸ್ ರಸ್ತೆಯಲ್ಲಿ ಬುಧವಾರ ಮರ ಉರುಳಿ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ.

ಬೆಳಗ್ಗೆ ಸಂಭವಿಸಿದ ಈ ಘಟನೆಯಿಂದ ಈ ಮಾರ್ಗದಲ್ಲಿನ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ರಸ್ತೆಯ ಮಧ್ಯೆ ಮರ ಬಿದ್ದಿದ್ದರಿಂದ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿ, ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು.ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಮರವನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ, ಅಗತ್ಯ ಉಪಕರಣಗಳ ನೆರವಿನಿಂದ ರಸ್ತೆಯಿಂದ ತೆರವುಗೊಳಿಸಲಾಯಿತು.ಮರವನ್ನು ತೆರವುಗೊಳಿಸಿದ ಬಳಿಕ ಸಂಚಾರ ಮತ್ತೆ ಸಹಜ ಸ್ಥಿತಿಗೆ ಮರಳಿತು. ಘಟನೆಯಲ್ಲಿ ಯಾವುದೇ ವ್ಯಕ್ತಿಗೆ ಗಾಯಗಳಾಗಿಲ್ಲ ಹಾಗೂ ಯಾವುದೇ ವಾಹನಕ್ಕೂ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಮರ ಉರುಳಿ ಬೀಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.