ಉಡುಪಿ: ಫ್ರೆಂಡ್‌ಶಿಪ್ ಕ್ಲಬ್ ಸದಸ್ಯತ್ವದ ಆಮಿಷ; ಹಿರಿಯ ನಾಗರಿಕನಿಗೆ 5.11 ಲಕ್ಷ ರೂ. ವಂಚಿಸಿದ ಸೈಬರ್ ಚೋರರು!

ಉಡುಪಿ : ‘ಫ್ರೆಂಡ್‌ಶಿಪ್ ಕ್ಲಬ್’ (Friendship Club) ಸದಸ್ಯತ್ವ ಕೊಡಿಸುವುದಾಗಿ ನಂಬಿಸಿ ಹಿರಿಯ ನಾಗರಿಕರೊಬ್ಬರಿಂದ ಬರೋಬ್ಬರಿ ₹5.11 ಲಕ್ಷಕ್ಕೂ ಅಧಿಕ ಹಣವನ್ನು ಸೈಬರ್ ವಂಚಕರು ಲಪಟಾಯಿಸಿರುವ ಘಟನೆ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಉಡುಪಿಯ ಕಡಿಯಾಳಿ ನಿವಾಸಿ ವಂಚನೆಗೊಳಗಾದ ದುರ್ದೈವಿ. ವಂಚಕರು ನೀಡಿದ ಸುಳ್ಳು ಆಮಿಷಕ್ಕೆ ಮರುಳಾದ ಇವರು, ತಮ್ಮ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಅಪಾರ ಪ್ರಮಾಣದ ಹಣವನ್ನು ಸೈಬರ್ ಚೋರರ ಖಾತೆಗಳಿಗೆ ವರ್ಗಾಯಿಸಿದ್ದಾರೆ.

ಸೈಬರ್ ವಂಚಕರ ಸೂಚನೆಯಂತೆ ಸಂತ್ರಸ್ತರು ಗೂಗಲ್ ಪೇ (Google Pay), ಕ್ಯೂಆರ್ ಕೋಡ್ ಸ್ಕ್ಯಾನ್ (QR Scanner) ಹಾಗೂ ನೇರ ಬ್ಯಾಂಕ್ ಖಾತೆಗಳ ಮೂಲಕ ಹಣ ಕಳುಹಿಸಿದ್ದಾರೆ. ಜೂನ್ 27 ರಂದು ₹29,000, ಜುಲೈ9 ರಂದು ಮೂರು ಕಂತುಗಳಲ್ಲಿ 99 ಸಾವಿರ ಸೇರಿದಂತೆ ಒಟ್ಟು ₹ 5,11, 882 ಶುಲ್ಕದ ರೂಪದಲ್ಲಿ ಪಾವತಿಸಿದ್ದಾರೆ. ಹಣ ಪಾವತಿಸಿದರೂ ಯಾವುದೇ ಸದಸ್ಯತ್ವ ಸಿಗದೆ, ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಾಗ ತಾನು ಆನ್‌ಲೈನ್ ವಂಚನೆಗೆ (Cyber Fraud) ಒಳಗಾಗಿರುವುದು ಅವರಿಗೆ ಅರಿವಾಗಿದೆ. ಈ ಕುರಿತು ಅವರು ನೀಡಿದ ದೂರಿನನ್ವಯ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸೈಬರ್ ಕ್ರೈಂ ತನಿಖೆ ಚುರುಕುಗೊಳಿಸಿದ್ದಾರೆ