ಉಡುಪಿ: ದೇವಸ್ಥಾನದ ಕೆರೆಯಲ್ಲಿ ಈಜಲು ತೆರಳಿದ್ದ 15 ವರ್ಷದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾ*ವು!

ಉಡುಪಿ: ತೆಂಕಪೇಟೆಯ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟ ದುರಂತ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.
ಬೆಳ್ಳಂಪಳ್ಳಿ ಕುಕ್ಕಿಕಟ್ಟೆಯ ಕೃಷ್ಣ ನಾಯಕ್ ಎಂಬವರ ಪುತ್ರ ಆದಿತ್ಯ ನಾಯಕ್ (15) ಮೃತಪಟ್ಟ ದುರ್ದೈವಿ. ದೇವಸ್ಥಾನದಲ್ಲಿ ಭಜನೆ ಕಾರ್ಯಕ್ರಮ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಆದಿತ್ಯ ತನ್ನ ಸಂಬಂಧಿಯೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ಎಂದು ತಿಳಿದುಬಂದಿದೆ.

ಭಜನಾ ಕಾರ್ಯಕ್ರಮದ ಪ್ರಯುಕ್ತ ಭಕ್ತರು ಕೆರೆಯಲ್ಲಿ ಈಜುತ್ತಿದ್ದಾಗ ಆದಿತ್ಯ ಕೂಡ ನೀರಿಗಿಳಿದಿದ್ದನು. ಆತನ ಜೊತೆಯಲ್ಲಿದ್ದ ಸಂಬಂಧಿಗೆ ಈಜು ಬಾರದ ಕಾರಣ ಆತ ದಡದಲ್ಲೇ ಉಳಿದುಕೊಂಡಿದ್ದನು. ಕೆರೆಯ ಮಧ್ಯಭಾಗದಲ್ಲಿ ಈಜುತ್ತಿದ್ದ ಆದಿತ್ಯ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದನು.
ಘಟನೆ ತಿಳಿಯುತ್ತಿದ್ದಂತೆಯೇ ದೇವಸ್ಥಾನದ ಆಡಳಿತ ಮಂಡಳಿಯವರು ಮುಳುಗು ತಜ್ಞ ಈಶ್ವರ ಮಲ್ಪೆ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಈಶ್ವರ ಮಲ್ಪೆ ಹಾಗೂ ತಂಡ ಕೆರೆಗೆ ಇಳಿದು ಕಾರ್ಯಾಚರಣೆ ನಡೆಸಿ ಆದಿತ್ಯನನ್ನು ಮೇಲಕ್ಕೆತ್ತಿದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಆತನನ್ನು ತಕ್ಷಣವೇ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಆತ ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದರು.