ತುಮಕೂರು: ಸೂರ್ಯಾಸ್ತ ತೋರಿಸುವ ಭರದಲ್ಲಿ ಆಯತಪ್ಪಿ 50 ಅಡಿ ಪ್ರಪಾತಕ್ಕೆ ಬಿದ್ದ ಉಪನ್ಯಾಸಕ!

ತುಮಕೂರು: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ದೇವರಾಯನದುರ್ಗದಲ್ಲಿ ಹೊರರಾಜ್ಯದ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಸೂರ್ಯಾಸ್ತ ತೋರಿಸುವ ಭರದಲ್ಲಿ ಉಪನ್ಯಾಸಕರೊಬ್ಬರು ಎಡವಟ್ಟು ಮಾಡಿಕೊಂಡಿದ್ದಾರೆ. ಕಾಲು ಜಾರಿ ಬೆಟ್ಟದ ತುದಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಆತಂಕಕಾರಿ ಘಟನೆ ನಡೆದಿದೆ. 50 ಅಡಿ ಆಳಕ್ಕೆ ಬಿದ್ದ ಉಪನ್ಯಾಸಕ ಶಿವಪ್ರಸಾದ್ ಅದೃಷ್ಟವಶಾತ್ ಬದುಕುಳಿದಿದ್ದಾರೆ. ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರು ತಾಲೂಕಿನ ಒಬಳಾಪುರ ಮೂಲದ ಶಿವಪ್ರಸಾದ್, ಪ್ರಸ್ತುತ ಅರಸೀಕೆರೆಯ ಪಿಯು ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶನಿವಾರ ಸಂಜೆ ಅವರು ತಮ್ಮ ಸ್ನೇಹಿತನೊಂದಿಗೆ ದೇವರಾಯನದುರ್ಗ ಬೆಟ್ಟಕ್ಕೆ ತೆರಳಿದ್ದಾರೆ. ಈ ವೇಳೆ ಅಲ್ಲಿಗೆ ಪ್ರವಾಸಕ್ಕೆ ಬಂದಿದ್ದ ಹೊರರಾಜ್ಯದ ಆರು ಮಂದಿ ಟೆಕ್ಕಿಗಳು ಸಿಕ್ಕಿದ್ದಾರೆ.
ಸ್ಥಳೀಯರಾದ ಶಿವಪ್ರಸಾದ್, ಬೆಟ್ಟದಿಂದ ಸೂರ್ಯಾಸ್ತ ಅದ್ಭುತವಾಗಿ ಕಾಣಿಸುತ್ತದೆ ಎಂದು ಆ ಟೆಕ್ಕಿಗಳನ್ನು ತಾವೇ ದೇವಾಲಯದ ಹಿಂಭಾಗದ ಅಪಾಯಕಾರಿ ಬಂಡೆಯ ತುದಿಗೆ ಕರೆದೊಯ್ದಿದ್ದಾರೆ. ಆದರೆ, ದುರದೃಷ್ಟವಶಾತ್ ಬಂಡೆಯ ತುದಿಯಲ್ಲಿ ಹೆಜ್ಜೆ ಇಡುತ್ತಿದ್ದಂತೆ ಆಯತಪ್ಪಿ ಸುಮಾರು 50 ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದಾರೆ.
ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಉಪನ್ಯಾಸಕ ಶಿವಪ್ರಸಾದ್ ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ತಕ್ಷಣವೇ ಸ್ಥಳೀಯರು ಕಾರ್ಯಪ್ರವೃತ್ತರಾಗಿ ಅವರನ್ನು ಪ್ರಪಾತದಿಂದ ರಕ್ಷಿಸಿದ್ದು, ಇದೀಗ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಕುರಿತು ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.