ರಾಷ್ಟ್ರೀಯ ಭದ್ರತೆಗೆ ಆತಂಕ: ಭಾರತೀಯ ಸೇನೆಯ ‘ಬ್ರಿಗೇಡಿಯರ್’ ಸೋಗಿನಲ್ಲಿ ಮೆರೆದಿದ್ದ ಖದೀಮ ಅರೆಸ್ಟ್!

ಶಹಜಹಾನ್ಸುರ: ಭಾರತೀಯ ಸೇನೆಯ ಬ್ರಿಗೇಡಿಯರ್ ಎಂದು ಬಿಂಬಿಸಿಕೊಂಡು ತಿರುಗಾಡುತ್ತಿದ್ದ 21 ವರ್ಷದ ವ್ಯಕ್ತಿಯೊಬ್ಬನನ್ನು ಭಾರತೀಯ ಸೇನಾ ಸಿಬ್ಬಂದಿ, ಶಹಜಹಾನ್ ಕಂಟೋನ್ವೆಂಟ್‌ನ ಶಹೀದ್ ಮ್ಯೂಸಿಯಂ ಬಳಿ ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿಯನ್ನು ಅರ್ಯನ್ ವರ್ಮಾ ಎಂದು ಗುರುತಿಸಲಾಗಿದ್ದು, ಶಹಜಹಾನ್ಸುರ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಸೇನೆಯ ಹಿರಿಯ ಅಧಿಕಾರಿ ಎಂದು ಹೇಳಿಕೊಂಡು ಮಿಲಿಟರಿ ಸಮವಸ್ತ್ರದಲ್ಲಿ ತಿರುಗಾಡುತ್ತಿದ್ದ ಎನ್ನಲಾಗಿದೆ.
ಯುವಕನೊಬ್ಬ ಬ್ರಿಗೇಡಿಯರ್ ಸಮವಸ್ತ್ರವನ್ನು ಧರಿಸಿಕೊಂಡು ಪದೇ ಪದೇ ಅಡ್ಡಾಡುತ್ತಿದ್ದಾನೆ ಎಂಬ ಮಾಹಿತಿಯನ್ನು ಪಡೆದ ಸೇನಾ ಅಧಿಕಾರಿಗಳು ಕಳೆದ ಎಪ್ರಿಲ್‌ನಿಂದೀಚೆಗೆ ವರ್ಮಾ ಚಲನ-ವಲನಗಳ ಮೇಲೆ ನಿಗಾ ಇರಿಸಿದ್ದರು. ಆದರೆ ಇದುವರೆಗೆ ಆತನನ್ನು ಪತ್ತೆ ಮಾಡಲು ಸಾಧ್ಯವಾಗದ ಕಾರಣ ಈ ಬಾರಿ ನಿಯಂತ್ರಿತ ಪರಿಸರಕ್ಕೆ ಬರುವಂತೆ ಆಮಿಷ ತೋರಿಸಿ ಬಲೆ ಬೀಸಲಾಯಿತು ಎಂದು ಸೇನೆಯ ಅಧಿಕಾರಿಗಳು ಹೇಳಿದ್ದಾರೆ.
ನಕಲಿ ಸೇನಾ ಅಧಿಕಾರಿಯನ್ನು ಸೇನೆಯ ನೈಜ ಅಧಿಕಾರಿಗಳು ಸಾಮಾನ್ಯ ನಾಗರಿಕರ ಸೋಗಿನಲ್ಲಿ ಸಂಪರ್ಕಿಸಿ, ನೇಮಕಾತಿ ಪರೀಕ್ಷೆಗೆ ಸಜ್ಜಾಗುತ್ತಿರುವ ಯುವ ಅಭ್ಯರ್ಥಿಗಳಿಗೆ ಪ್ರೇರಣಾತ್ಮಕ ಭಾಷಣ ಮಾಡಬೇಕು ಎಂದು ಕೋರಿದ್ದಾರೆ. ಶಹೀದ್ ಮ್ಯೂಸಿಯಂನಲ್ಲಿ ಈ ಸಮಾರಂಭ ನಡೆಯಲಿದೆ ಎಂದು ಆತನಿಗೆ ಮಾಹಿತಿ ನೀಡಲಾಗಿತ್ತು.
ಬ್ರಿಗೇಡಿಯರ್ ದಿರಿಸಿನಲ್ಲಿ ವರ್ಮಾ ಶುಕ್ರವಾರ ಮುಂಜಾನೆ ಸಮಾರಂಭ ಸ್ಥಳಕ್ಕೆ ಆಗಮಿಸಿದ. ಮಿಲಿಟರಿ ಸ್ಟಾರ್ ಮತ್ತು ಧ್ವಜವನ್ನು ಹೊಂದಿದ್ದ ಹ್ಯಾರಿಯರ್ ಎಸ್‌ಯುವಿಯಲ್ಲಿ ಅತಿ ಹಿರಿಯ ಅಧಿಕಾರಿಗಳೊಂದಿಗೆ ಆಗಮಿಸಿದ. ತಕ್ಷಣವೇ ಸೇನೆಯ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆ ವೇಳೆ ಆತನ ಚಾಲಕನಿಂದ ನಕಲಿ ಸರ್ಕಾರಿ ಗುರುತಿನ ಪತ್ರವನ್ನು ಕೂಡಾ ಸೇನಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಕಮಾಂಡೊಗಳು ಎಂದು ಹೇಳಿಕೊಂಡ ಇಬ್ಬರು ಬೌನ್ಸರ್‌ಗಳನ್ನು ಈತ ನಿಯೋಜಿಸಿಕೊಂಡಿದ್ದ. ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿ ಉನ್ನತ ದರ್ಜೆಯ ಮಿಲಿಟರಿ ಅಧಿಕಾರಿ ಎಂದು ಬಿಂಬಿಸಿಕೊಂಡಿದ್ದ. ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನ ಡೀನ್‌ನ ಮೊಹರು ಇರುವ ಗುರುತಿನ ಪತ್ರವನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈತ ಹೊಂದಿದ್ದ ಆರ್ಮಿ ರೆಜಿಮೆಂಟಲ್ ಕೇನ್ ಮತ್ತು ನಕಲಿ ಪಿಸ್ತೂಲ್ ಕೂಡಾ ವಶಪಡಿಸಿಕೊಳ್ಳಲಾಗಿದೆ.
