ಸುರತ್ಕಲ್: ಗುಡ್ಡೆಕೊಪ್ಲದ ಆವಿಷ್ಕಾರ್ ಗ್ರಾಫಿಕ್ಸ್ ಸೆಂಟರ್‌ನಲ್ಲಿ ಭೀಕರ ಅಗ್ನಿ ಅವಘಡ; ಅಂದಾಜು ರೂ. 1.60 ಕೋಟಿ ನಷ್ಟ!

ಮಂಗಳೂರು: ಸುರತ್ಕಲ್‌ನ ಗುಡ್ಡೆಕೊಪ್ಲದಲ್ಲಿರುವ ಆವಿಷ್ಕಾರ್ ಗ್ರಾಫಿಕ್ಸ್ ಸೆಂಟರ್‌ನಲ್ಲಿ ಆಗಸ್ಟ್ 10ರಂದು ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು ರೂ.1.60 ಕೋಟಿ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.

ಅಗ್ನಿ ಅವಘಡದಲ್ಲಿ ಮುದ್ರಣ ಕೇಂದ್ರದಲ್ಲಿದ್ದ ಹಲವು ಮುದ್ರಣ ಯಂತ್ರಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಘಟನೆಯಿಂದ ಮುದ್ರಣ ಕೇಂದ್ರಕ್ಕೆ ಭಾರೀ ಪ್ರಮಾಣದ ಹಾನಿಯಾಗಿದೆ. ರಾತ್ರಿ ವೇಳೆ ಸ್ಥಳೀಯ ನಿವಾಸಿಗಳು ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿ ತಕ್ಷಣ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಯ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪರಿಶೀಲನೆ ನಡೆಯುತ್ತಿದೆ.