ಕ್ರಿಕೆಟಿಗ ಅಭಿಷೇಕ್ ಪೊರೇಲ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ; ಪೊಲೀಸ್ ದೂರು ದಾಖಲು!

ಹೊಸದಿಲ್ಲಿ: ವಿವಾಹವಾಗುವ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ, ಇದೀಗ ವಿವಾಹಕ್ಕೆ ನಿರಾಕರಿಸುತ್ತಿದ್ದಾರೆ ಎಂದು ಆಪಾದಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಅಭಿಷೇಕ್ ಪೊರೇಲ್ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಮೊಗ್ರಾ ಪೊಲೀಸ್ ಠಾಣೆಯಲ್ಲಿ ಮಹಿಳೆ ಹಾಗೂ ಅವರ ತಾಯಿ ಜಂಟಿಯಾಗಿ ದೂರು ನೀಡಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಮೂರು ವರ್ಷಗಳಿಂದ ಪೊರೇಲ್ ಜತೆ ಸಂಬಂಧ ಇದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಆದರೆ ಕ್ರಿಕೆಟ್ ಪಟು ಕ್ರಮೇಣ ಅಂತರ ಕಾಪಾಡಿಕೊಳ್ಳಲು ಆರಂಭಿಸಿದ್ದರಿಂದ ಕಳೆದ ವರ್ಷದಿಂದ ಸಮಸ್ಯೆ ಆರಂಭವಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ವಿವಾಹವಾಗುವುದಾಗಿ ಪೊರೇಲ್ ಭರವಸೆ ನೀಡಿ ಇದೀಗ ಹಿಂದೆ ಸರಿದಿದ್ದಾರೆ. ವಿವಾಹದ ಭರವಸೆ ನೀಡಿ ಲೈಂಗಿಕ ಸಂಬಂಧವನ್ನೂ ಬೆಳೆಸಿದ್ದಾಗಿ 23 ವರ್ಷದ ಯುವತಿ ಹೇಳಿದ್ದಾರೆ. ತಮ್ಮ ಮೇಲೆ ಹಲ್ಲೆಯೂ ನಡೆದಿದ್ದು, ಬೆದರಿಕೆ ಹಾಕಲಾಗಿದೆ ಎಂದೂ ದೂರು ನೀಡಲಾಗಿದೆ.
ಪ್ರಸಕ್ತ ಬೆಂಗಳೂರಿನಲ್ಲಿರುವ ಪೊರೇಲ್ ಈ ಆರೋಪಗಳನ್ನು ನಿರಾಕರಿಸಿದ್ದು, ಈ ಆರೋಪ ಆಧಾರರಹಿತ. ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್‌ನಲ್ಲಿ ಯಶಸ್ಸು ಗಳಿಸಿರುವ ಹಿನ್ನೆಲೆಯಲ್ಲಿ ಈ ಆರೋಪ ಮಾಡಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆ ನಡೆದ ಬಳಿಕ ಈ ಬಗ್ಗೆ ವಿವರ ನೀಡುವುದಾಗಿ ಅವರು ತಿಳಿಸಿದ್ದಾರೆ.
ದೂರು ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
