ದೀಪಾವಳಿ ನೆಪದಲ್ಲಿ ರೇವ್ ಪಾರ್ಟಿ ಆಯೋಜನೆ ಆರೋಪ: ಬೆಂಗಳೂರಿನಲ್ಲಿ ಸಿಸಿಬಿ ದಾಳಿ!

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ನೆಪದಲ್ಲಿ ಆಯೋಜಿಸಲಾಗಿದ್ದ ಹೈಟೆಕ್ ಸ್ವಿಮ್ಮಿಂಗ್ ಪೂಲ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ವಿವಿಧ ಬಗೆಯ ಮಾದಕ ವಸ್ತುಗಳು, ವಿದೇಶಿ ಮದ್ಯ ಹಾಗೂ ನಿಷೇಧಿತ ಹುಕ್ಕಾಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಮಾರತ್ತಹಳ್ಳಿ ಸಮೀಪದ ಕರಿಯಮ್ಮನ ಅಗ್ರಹಾರದಲ್ಲಿರುವ ವಿಲ್ಲಾವೊಂದರಲ್ಲಿ ಈ ಪೂಲ್ ಪಾರ್ಟಿ ನಡೆಯುತ್ತಿತ್ತು. ಹೈಟೆಕ್ ಸ್ವಿಮ್ಮಿಂಗ್ ಪೂಲ್ ವ್ಯವಸ್ಥೆಯೊಂದಿಗೆ ಬಹುತೇಕ ರೇವ್ ಪಾರ್ಟಿಯ ಮಾದರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಾಳಿಯ ವೇಳೆ ಗಾಂಜಾ, ಎಂಡಿಎಂಎ, ವಿದೇಶಿ ಮದ್ಯ ಹಾಗೂ ನಿಷೇಧಿತ ಹುಕ್ಕಾಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಪಾರ್ಟಿ ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೆ ನಡೆಯುತ್ತಿತ್ತು. ಕೇವಲ 50 ಜೋಡಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು. FV Social 404 ಮತ್ತು Hopzyx ಆ್ಯಪ್‌ಗಳ ಮೂಲಕ ಪಾರ್ಟಿ ಆಯೋಜಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ಪಾರ್ಟಿಯಲ್ಲಿ ಭಾಗವಹಿಸಲು ಪ್ರತ್ಯೇಕ ಪ್ರವೇಶ ಶುಲ್ಕ ನಿಗದಿಪಡಿಸಲಾಗಿತ್ತು. ಯುವಕರಿಗೆ 1,710 ರೂ., ಯುವತಿಯರಿಗೆ 1,080 ರೂ. ಹಾಗೂ ಜೋಡಿಗಳಿಗೆ 2,400 ರೂ. ಪ್ರವೇಶ ಶುಲ್ಕ ವಿಧಿಸಲಾಗಿತ್ತು.
ಸದ್ಯ ದಾಳಿ ನಡೆಸಿದ ಸಿಸಿಬಿ ಪೊಲೀಸರು ಪೂಲ್ ಪಾರ್ಟಿ ಆಯೋಜಕರಾದ ಅರಿಹಂತ್ ಪಾಂಡೆ, ಅಭಿನವ್ ಪಾಂಡೆ ಮತ್ತು ಪಾರ್ಥ ಎಂಬುವವರನ್ನ ಬಂಧಿಸಿದ್ದಾರೆ. ಪಾರ್ಟಿ ನಡೆಯುತ್ತಿದ್ದ ವಿಲ್ಲಾದಲ್ಲಿ ಪತ್ತೆಯಾದ ನಿಷೇಧಿತ ವಸ್ತುಗಳನ್ನ ವಶಕ್ಕೆ ಪಡೆದು ಪೊಲೀಸರು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪಾರ್ಟಿಯ ಆಯೋಜನೆ, ಮಾದಕ ವಸ್ತುಗಳ ಬಳಕೆ ಹಾಗೂ ಪೂರೈಕೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.