ಪುತ್ತೂರು: ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನ ವಶ; ಚಾಲಕನ ಬಂಧನ ಹಾಗೂ 3 ಮೂಕಪ್ರಾಣಿಗಳ ರಕ್ಷಣೆ!

ಪುತ್ತೂರು: ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ವಾಹನ ಚಾಲಕನೋರ್ವನನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದು, ಮೂರು ಜಾನುವಾರುಗಳನ್ನು ರಕ್ಷಿಸಲಾಗಿದೆ.

ಆ.23 ರಂದು ಬೆಳಗ್ಗೆ, ಆನಡ್ಕ ಕಡೆಯಿಂದ ಪಡೀಲ್ ಕಡೆಗೆ ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ಪುತ್ತೂರು ನಗರ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಸುರೇಶ್ ಸಿ ಟಿ ರವರಿಗೆ ಮಾಹಿತಿ ಬಂದಿತ್ತು . ಈ ಮಾಹಿತಿ ಮೇರೆಗೆ ಉಪ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಪುತ್ತೂರು ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಎಂಬಲ್ಲಿ ಪಿಕ್ ಆಫ್ ವಾಹನವನ್ನು ತಡೆದು ಪರಿಶೀಲಿಸಿದ್ದಾರೆ. ಪರಿಶೀಲನೆ ವೇಳೆ ವಾಹನದಲ್ಲಿ ಮೂರು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಪಿಕ್ ಆಫ್ ವಾಹನ ಚಾಲಕ ಮಹಮ್ಮದ್ ಜಬ್ಬಾರ್ ಎಂಬಾತನನ್ನು ವಿಚಾರಿಸಲಾಗಿದೆ. ಈ ಜಾನುವಾರುಗಳನ್ನು ಶಾಂತಿಗೋಡು ಗ್ರಾಮದ ನಿವಾಸಿ ಅಶೋಕ್ ಎಂಬವರಿಂದ ಖರೀದಿಸಲಾಗಿದೆ. ಯಾವುದೇ ಪರವಾನಿಗೆ ಇಲ್ಲದೇ ವಧೆ ಮಾಡುವ ಉದ್ದೇಶದಿಂದ ಸಾಗಿಸುತ್ತಿರುವುದಾಗಿ ತಿಳಿಸಿರುತ್ತಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಜಾನುವಾರು ಸಹಿತ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 101/2026, ಕಲಂ: 11(D) ಪ್ರಾಣಿ ಹಿಂಸಾ ಕಾಯ್ದೆ ಮತ್ತು ಕಲಂ: 4,5,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಹಾಗೂ ಕಲಂ: 66 R/w 192 (A) IMV Act ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.