Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಶಾಂತಿಗೆ ಭಂಗ ತರುತ್ತಿದ್ದವನಿಗೆ ಬುದ್ಧಿ ಹೇಳಲು ಹೋದ ಪೊಲೀಸರಿಗೆ ಕತ್ತಿ-ಕೊಡಲಿಯಿಂದ ಹಲ್ಲೆ!

Spread the love

ಕೋಟ: ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿ ಸಾರ್ವಜನಿಕ ಶಾಂತಿಗೆ ಧಕ್ಕೆ ತರುತ್ತಿದ್ದ ಯುವಕನ ಕೃತ್ಯವನ್ನು ವಿಚಾರಿಸಲು ಹೋದ ಪೊಲೀಸ್ ಅಧಿಕಾರಿಯ ಮೇಲೆಯೇ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಮಂಗಳವಾರ ಬೆಳಿಗ್ಗೆ ಕೋಟತಟ್ಟು ಗ್ರಾಮದ ಬೆಲ್ಲದ ಗಣಪತಿ ದೇವಸ್ಥಾನದ ಎದುರು ನಡೆದಿದೆ. ಈ ವೇಳೆ ಕರ್ತವ್ಯ ನಿರತ ಕೋಟ ಠಾಣಾ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋಟ ಠಾಣೆಯ ಪ್ರಭಾರ ಹೊತ್ತಿದ್ದ ರಾಘವೇಂದ್ರ ಬಿ.ಎನ್. ಹಲ್ಲೆಗೊಳಗಾದ ಪೊಲೀಸ್ ಅಧಿಕಾರಿಯಾಗಿದ್ದಾರೆ. ಕೋಟತಟ್ಟುವಿನ ಸಾರ್ವಜನಿಕ ರಸ್ತೆಯಲ್ಲಿ ದಾಂಧಲೆ ನಡೆಸಿ, ಪೋಲೀಸರ ತಲೆ ತೆಗೆಯುವುದಾಗಿ ಅಬ್ಬರಿಸಿದ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಜುಲೈ 14 ರಂದು ಬೆಳಿಗ್ಗೆ ಸುಮಾರು 9 ಗಂಟೆಗೆ ಕೋಟ ಠಾಣೆಗೆ ಸಾರ್ವಜನಿಕರೊಬ್ಬರು ಫೋನ್ ಕರೆ ಮಾಡಿ, “ಕೋಟತಟ್ಟು ಗ್ರಾಮದ ಬೆಲ್ಲದ ಗಣಪತಿ ದೇವಸ್ಥಾನದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ವ್ಯಕ್ತಿಯೊಬ್ಬ ದೊಡ್ಡ ಟಿವಿ, ಸೌಂಡ್ ಬಾಕ್ಸ್ ಹಾಗೂ ಲ್ಯಾಪ್‌ಟಾಪ್ ಇಟ್ಟುಕೊಂಡು ವಿಪರೀತ ಶಬ್ದದಲ್ಲಿ ಮ್ಯೂಸಿಕ್ ಹಾಕಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾನೆ” ಎಂದು ದೂರು ನೀಡಿದ್ದರು. ಈ ಮಾಹಿತಿ ಸಿಗುತ್ತಿದ್ದಂತೆ ಠಾಣಾ ಪ್ರಭಾರದಲ್ಲಿದ್ದ ಅಧಿಕಾರಿ ರಾಘವೇಂದ್ರ ಅವರು ಸಹ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ್ದರು.

ಪೊಲೀಸರು ಸ್ಥಳಕ್ಕೆ ಹೋದಾಗ ಆರೋಪಿಯು ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಮಣ್ಣಿನ ರಸ್ತೆಯಲ್ಲಿ ಮ್ಯೂಸಿಕ್ ಸಿಸ್ಟಮ್ ಹಾಕಿ ತೊಂದರೆ ಕೊಡುತ್ತಿರುವುದು ಕಂಡುಬಂದಿದೆ. ಅಧಿಕಾರಿ ರಾಘವೇಂದ್ರ ಅವರು ಆರೋಪಿಯ ಬಳಿ ಹೋಗಿ, “ಸಾರ್ವಜನಿಕ ರಸ್ತೆಯಲ್ಲಿ ಹೀಗೆ ಸೌಂಡ್ ಸಿಸ್ಟಮ್ ಇಟ್ಟು ಯಾಕೆ ತೊಂದರೆ ಕೊಡುತ್ತಿದ್ದೀಯಾ?” ಎಂದು ಸೌಮ್ಯವಾಗಿಯೇ ಪ್ರಶ್ನಿಸಿದ್ದಾರೆ. ಇದಕ್ಕೆ ತಕ್ಷಣವೇ ಆಕ್ರೋಶಗೊಂಡ ಆರೋಪಿ, “ನನ್ನನ್ನು ಕೇಳಲು ನೀವ್ಯಾರು? ನಾನು ಇಷ್ಟಬಂದದ್ದನ್ನು ಮಾಡುತ್ತೇನೆ” ಎಂದು ಪೊಲೀಸರ ಮೇಲೆಯೇ ರೇಗಾಡಿದ್ದಾನೆ. ಅಷ್ಟಕ್ಕೇ ನಿಲ್ಲದೆ ರಸ್ತೆಯಲ್ಲಿದ್ದ ಮರದ ಟೇಬಲ್ ಹಾಗೂ ಸೌಂಡ್ ಸಿಸ್ಟಮ್‌ಗಳನ್ನು ರಾಷ್ಟ್ರೀಯ ಹೆದ್ದಾರಿಯ ಮಧ್ಯಕ್ಕೆ ತಂದು ಇಟ್ಟು, ವಾಹನ ಸಂಚಾರಕ್ಕೆ ಸಂಪೂರ್ಣ ಅಡ್ಡಿ ಉಂಟು ಮಾಡಿದ್ದಾನೆ. ಅಲ್ಲದೆ ಪೊಲೀಸರು ಬಂದಿದ್ದ ಸರ್ಕಾರಿ ಬೈಕ್ ಅನ್ನು ಬಲವಾಗಿ ತಳ್ಳಿ ಜಖಂಗೊಳಿಸಿದ್ದಾನೆ.

ಇಷ್ಟಕ್ಕೆ ತಣ್ಣಗಾಗದ ಆರೋಪಿ ರಸ್ತೆ ಬದಿಯಲ್ಲಿದ್ದ ತನ್ನ ಮನೆಗೆ ಓಡಿಹೋಗಿ, ಅಲ್ಲಿಂದ ಮರದ ಹಿಡಿಯುಳ್ಳ ಚೂಪಾದ ಕಬ್ಬಿಣದ ಕತ್ತಿ ಮತ್ತು ಕಬ್ಬಿಣದ ಕೊಡಲಿಯನ್ನು ಹಿಡಿದುಕೊಂಡು ಬಂದಿದ್ದಾನೆ. ರಸ್ತೆಯಲ್ಲಿ ನಿಂತಿದ್ದ ಪೊಲೀಸರನ್ನು ಕಂಡು, “ಇವತ್ತು ಇವರನ್ನು ಇಲ್ಲಿಯೇ ಕೊಂದು ಹಾಕುತ್ತೇನೆ, ಈ ಪೊಲೀಸರ ತಲೆ ನನಗೆ ಬೇಕು!” ಎಂದು ಅರಚುತ್ತಾ ನೇರವಾಗಿ ರಾಘವೇಂದ್ರ ಅವರ ಮೇಲೆ ಕೊಡಲಿ ಹಾಗೂ ಕತ್ತಿಯಿಂದ ಬೀಸಿದ್ದಾನೆ. ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಕತ್ತಿ ತಗುಲಿ ರಾಘವೇಂದ್ರ ಅವರ ಎಡಗೈಗೆ ಗಾಯವಾಗಿದೆ.

ಹಲ್ಲೆಯಿಂದ ಸಾವು ಸಂಭವಿಸಬಹುದು ಎಂದು ತಿಳಿದಿದ್ದರೂ ಆರೋಪಿಯು ಸರ್ಕಾರಿ ಸಮವಸ್ತ್ರದಲ್ಲಿದ್ದ ಕರ್ತವ್ಯನಿರತ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾನೆ. ಸದ್ಯ ಗಾಯಾಳು ಅಧಿಕಾರಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಕೋಟ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಕೊಲೆ ಯತ್ನ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಮೊಕದ್ದಮೆ ದಾಖಲಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *