ಬ್ರೆಜಿಲ್ ಕನಸಿಗೆ ನಾರ್ವೆ ಕೊಡಲಿ ಏಟು: ಕೊನೆಯ ಅವಧಿಯಲ್ಲಿ ಹಾಲೆಂಡ್ ಅಬ್ಬರ; ಕ್ವಾರ್ಟರ್ಫೈನಲ್ಗೆ ಲಗ್ಗೆಯಿಟ್ಟ ನಾರ್ವೆ ತಂಡ!

ನ್ಯೂಜೆರ್ಸಿ: ಪಂದ್ಯದ ಕೊನೆಯ ಅವಧಿಯಲ್ಲಿ ಎರ್ಲಿಂಗ್ ಹಾಲೆಂಡ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ನಾರ್ವೆ ತಂಡವು ಬಲಿಷ್ಠ ಬ್ರೆಝಿಲ್ ತಂಡವನ್ನು2-1 ಅಂತರದಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು. ಇದರೊಂದಿಗೆ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಬ್ರೆಜಿಲ್ 16ರ ಹಂತದಲ್ಲಿ ವಿಶ್ವಕಪ್ ಅಭಿಯಾನವನ್ನು ಕೊನೆಗೊಳಿಸಿತು.
ರೋಚಕ ಪಂದ್ಯದ ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗದಿದ್ದರೂ, ದ್ವಿತೀಯಾರ್ಧದಲ್ಲಿ ಮತ್ತಷ್ಟು ರೋಚಕತೆ ಪಡೆಯಿತು. ಮ್ಯಾಂಚೆಸ್ಟರ್ ಸಿಟಿ ತಂಡದ ಪ್ರೈಕರ್ ಹಾಲೆಂಡ್, 79ನೇ ನಿಮಿಷದಲ್ಲಿ ಎತ್ತರಕ್ಕೆ ಜಿಗಿದು ಹೆಡರ್ ಮಾಡುವ ಮೂಲಕ ಅಲಿಸನ್ ಅವರನ್ನು ವಂಚಿಸಿ ಪಂದ್ಯದ ಮೊದಲ ಗೋಲು ಗಳಿಸಿದರು.

ಬಳಿಕ ಹಾಲೆಂಡ್ ದೂರದಿಂದ ಹೊಡೆದ ಲೋ-ಡ್ರೈವ್ ಶಾಟ್ ನೇರವಾಗಿ ನೆಟ್ನ ಮೂಲೆ ಸೇರಿ ಎರಡನೇ ಗೋಲಾಗಿ ಪರಿವರ್ತಿತವಾಯಿತು. ಇದು ಐದು ಬಾರಿಯ ಚಾಂಪಿಯನ್ಸ್ ಆದ ಬ್ರೆಝಿಲ್ ತಂಡವನ್ನು ಸಂಪೂರ್ಣವಾಗಿ ದಿಗ್ಧಮೆಗೊಳಿಸಿತು.
ಪಂದ್ಯದ ಕೊನೆಯ ಕ್ಷಣಗಳಲ್ಲಿ ನೇಮರ್ ಪೆನಾಲ್ಟಿ ಮೂಲಕ ಒಂದು ಗೋಲು ಗಳಿಸಿ ಹಿನ್ನಡೆಯನ್ನು ಕಡಿಮೆ ಮಾಡಿದರು. ಆದರೆ ಅದಕ್ಕೂ ಮುನ್ನ ಬ್ರೂನೋ ಗಿಮರೇಶ್ ಹೊಡೆದ ಪೆನಾಲ್ಟಿ ಕಿಕ್ ಅನ್ನು ನಾರ್ವೆ ಗೋಲ್ ಕೀಪರ್ ಓರ್ಜನ್ ನೈಲ್ಯಾಂಡ್ ಅದ್ಭುತವಾಗಿ ತಡೆದಿದ್ದರು. ಬ್ರೆಜಿಲ್ ತಂಡವು ತನಗೆ ಸಿಕ್ಕ ಅವಕಾಶಗಳನ್ನು ಕೈಚೆಲ್ಲಿದ ಪರಿಣಾಮ, ಬ್ರೆಝಿಲ್ ಸೋಲೊಪ್ಪಿಕೊಳ್ಳಬೇಕಾಯಿತು.
ಈ ಗೋಲುಗಳೊಂದಿಗೆ ಹಾಲೆಂಡ್ ಪ್ರಸಕ್ತ ವಿಶ್ವಕಪ್ನಲ್ಲಿ ತಮ್ಮ ಒಟ್ಟು ಗೋಲುಗಳ ಸಂಖ್ಯೆಯನ್ನು ಏಳಕ್ಕೆ ಏರಿಸಿದ್ದಾರೆ. ಈ ಮೂಲಕ ಅವರು ಗೋಲ್ಡನ್ ಬೂಟ್ ರೇಸ್ನಲ್ಲಿ ಲಿಯೋನೆಲ್ ಮೆಸ್ಸಿ ಮತ್ತು ಕಿಲಿಯನ್ ಎಂಬಪ್ಪೆ ಅವರೊಂದಿಗೆ ಸಮಬಲ ಸಾಧಿಸಿದ್ದಾರೆ. ಅಷ್ಟೇ ಅಲ್ಲದೆ, ನಾರ್ವೆ ಪರ ಸತತ 14 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಗೋಲು ಗಳಿಸಿದಂತಾಗಿದ್ದು, ತಮ್ಮ ಅಸಾಧಾರಣ ದಾಖಲೆಯನ್ನು ಮತ್ತಷ್ಟು ವಿಸ್ತರಿಸಿದ್ದಾರೆ.
ಮುಂದಿನ ಪಂದ್ಯದಲ್ಲಿ ನಾರ್ವೆ ತಂಡವು ಇಂಗ್ಲೆಂಡ್ ಅಥವಾ ಮೆಕ್ಸಿಕೋ ತಂಡವನ್ನು ಎದುರಿಸಲಿದೆ.