ಹೊಸದಿಲ್ಲಿ: ಮುಂದಿನ ಚುನಾವಣೆಯಲ್ಲಿ ವಿಪಕ್ಷಗಳ ಮೈತ್ರಿ ಗೆದ್ದರೆ ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೆ ಹಕ್ಕು ಮಂಡಿಸಬಹುದು: ಎಂ.ಎ. ಬೇಬಿ!

ಹೊಸದಿಲ್ಲಿ : ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟ ಗೆಲುವು ಸಾಧಿಸಿದರೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೆ ಹಕ್ಕು ಮಂಡಿಸಬಹುದು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಹೇಳಿದ್ದಾರೆ.
ಆದರೆ, ಪ್ರಧಾನಿ ಅಭ್ಯರ್ಥಿ ಅಥವಾ ನಾಯಕತ್ವದ ಬಗ್ಗೆ ಯಾವುದೇ ನಿರ್ಧಾರವನ್ನು ಚುನಾವಣೆಯ ಬಳಿಕವೇ ಕೈಗೊಳ್ಳಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಚುನಾವಣೆಗೂ ಮುನ್ನ ಸಂಭವನೀಯ ನಾಯಕತ್ವದ ಬಗ್ಗೆ ಊಹಾಪೋಹಗಳಿಗೆ ಸಿಪಿಐ(ಎಂ) ಉತ್ತೇಜನ ನೀಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

‘ಸಾಮಾನ್ಯವಾಗಿ ವಿರೋಧ ಪಕ್ಷದ ನಾಯಕನಿಗೆ ಪ್ರಧಾನಿ ಹುದ್ದೆಗೆ ಹಕ್ಕು ಮಂಡಿಸುವ ಅವಕಾಶ ಇರುತ್ತದೆ. ಆದರೆ, ಪ್ರಧಾನಿ ‘ಯಾರು ಆಗಬೇಕು ಎಂಬುದನ್ನು ಚುನಾವಣೆಯ ಬಳಿಕವೇ ಚರ್ಚಿಸಬೇಕು” ಎಂದು ಬೇಬಿ ತಿಳಿಸಿದರು.
ವಿರೋಧ ಪಕ್ಷಗಳ ಮೈತ್ರಿಕೂಟ ಬಹುಮತ ಗಳಿಸಿದ ಬಳಿಕ ಸರ್ಕಾರವನ್ನು ಯಾರು ಮುನ್ನಡೆಸಬೇಕು ಎಂಬುದನ್ನು ನಿರ್ಧರಿಸಬೇಕು. ಅಂತಹ ನಿರ್ಧಾರ ಕೈಗೊಳ್ಳುವಷ್ಟು ಎಲ್ಲ ಪಕ್ಷಗಳು ಪ್ರಬುದ್ಧವಾಗಿವೆ ಎಂದು ಅವರು ಹೇಳಿದರು.
“ವಿರೋಧ ಪಕ್ಷಗಳು ಜಯಗಳಿಸಿದರೆ, ಪ್ರಧಾನಿ ಯಾರು ಆಗಬೇಕು ಎಂಬುದು ಚುನಾವಣೆಯ ಬಳಿಕ ಚರ್ಚಿಸಬೇಕಾದ ವಿಷಯ” ಎಂದು ಅವರು ಸ್ಪಷ್ಟಪಡಿಸಿದರು.
ಸಿಪಿಐ(ಎಂ)ನ ಹಿಂದಿನ ಅನುಭವವನ್ನು ನೆನಪಿಸಿಕೊಂಡ ಬೇಬಿ, 1996ರ ಲೋಕಸಭಾ ಚುನಾವಣೆಯ ಬಳಿಕ ಯುನೈಟೆಡ್ ಫ್ರಂಟ್ ಅತಿ ದೊಡ್ಡ ಮೈತ್ರಿಕೂಟವಾಗಿ ಹೊರಹೊಮ್ಮಿದಾಗ ನಡೆದ ಬೆಳವಣಿಗೆಯನ್ನು ಉಲ್ಲೇಖಿಸಿದರು. ಆಗ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಅವರನ್ನು ಪ್ರಧಾನಿಯಾಗಿಸಬೇಕೇ ಎಂಬ ಬಗ್ಗೆ ಪಕ್ಷದ ಕೇಂದ್ರೀಯ ಸಮಿತಿ ಚರ್ಚಿಸಿತ್ತು ಎಂದು ಅವರು ಹೇಳಿದರು.
“ನಮ್ಮ ಬಲವನ್ನು ಆಧರಿಸಿ ಪ್ರಧಾನಿ ಹುದ್ದೆಗೆ ಹಕ್ಕು ಮಂಡಿಸುವುದು ಹಾಸ್ಯಾಸ್ಪದವಾಗುತ್ತದೆ. ಹೀಗಾಗಿ, ಸಹಜವಾಗಿಯೇ ವಿರೋಧ ಪಕ್ಷದ ನಾಯಕನಿಗೆ ಆ ಹಕ್ಕು ಇರುತ್ತದೆ” ಎಂದು ಬೇಬಿ ಹೇಳಿದರು.
ಚುನಾವಣೆಗೂ ಮುನ್ನ ಸಂಭವನೀಯ ಪ್ರಧಾನಿ ಅಭ್ಯರ್ಥಿ ಅಥವಾ ನಾಯಕತ್ವದ ಬಗ್ಗೆ ಊಹಾಪೋಹಗಳಿಗೆ ಸಿಪಿಐ(ಎಂ) ಉತ್ತೇಜನ ನೀಡಲು ಬಯಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.