ಮೈಸೂರು ದಸರಾದಲ್ಲಿ ವಿಂಟೇಜ್ ಕಾರ್ ಸಂಭ್ರಮ!

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ (Mysuru Dasara) 2026ರ ಸಂಭ್ರಮದಲ್ಲಿ ಹಳೆಯ ಕಾಲದ ವೈಭವ ಮರುಕಳಿಸಿದ್ದು, ಕರ್ನಾಟಕ ವಿಂಟೇಜ್ ಅಂಡ್ ಕ್ಲಾಸಿಕ್ ಕಾರ್ ಕ್ಲಬ್ ವತಿಯಿಂದ ಮೈಸೂರು ಅರಮನೆ ಮುಂಭಾಗ ವಿಂಟೇಜ್ ಕಾರ್ (Vintage Car) ಪ್ರದರ್ಶನ ಏರ್ಪಡಿಸಲಾಗಿದೆ.ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿರುವ ಸುಮಾರು 100 ವರ್ಷಗಳಷ್ಟು ಹಳೆಯದಾದ ಅಪರೂಪದ ಕ್ಲಾಸಿಕ್ ಕಾರುಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿವೆ. ಒಂದು ಕಾಲದಲ್ಲಿ ಮಹಾರಾಜರು ಹಾಗೂ ಆಗರ್ಭ ಶ್ರೀಮಂತರು ಬಳಕೆ ಮಾಡುತ್ತಿದ್ದ ಈ ಐಷರಾಮಿ ವಾಹನಗಳನ್ನು ಸಾವಿರಾರು ಮಂದಿ ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ.ಪ್ರದರ್ಶನದಲ್ಲಿ ಡಬ್ಲ್ಯು123, ವಿಲ್ಲೀಸ್ ಜೀಪ್, ಸ್ಟೂಡೆಬೇಕರ್, ವೋಕ್ಸ್ ವ್ಯಾಗನ್ ಮೈಕ್ರೋ ಬಸ್, ಮೋರಿಸ್, ಹಾಗೂ ಪ್ಲೈಮೌತ್ ಸೇರಿದಂತೆ ವಿವಿಧ ಬಗೆಯ 35ಕ್ಕೂ ಹೆಚ್ಚು ಹಳೆಯ ಕಾರುಗಳನ್ನ ಪ್ರದರ್ಶನ ಮಾಡಲಾಗಿದ್ದು, ಬುಧವಾರ ಮೈಸೂರಿನ ಹಲವೆಡೆ ಈ ವಿಂಟೇಜ್ ಕಾರುಗಳು ಸಂಚಾರ ಮಾಡಲಿವೆ.
